Social development through organization 
ಜಿಲ್ಲೆ

ಸಂಘಟನೆಯಿಂದ ಸಮಾಜ ಅಭಿವೃದ್ಧಿ

Vijayapura - Desk - Doddanagouda Gudihindin

ಗುಳೇದಗುಡ್ಡ: ಒಂದು ಸಮಾಜ ಅಭಿವೃದ್ಧಿ ಹೊಂದಲು ಸಂಘಟನೆ ಅವಶ್ಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯೆ ಭಾಗ್ಯಾ ಉದ್ನೂರ ಹೇಳಿದರು.

ಪಟ್ಟಣದ ಸಾಲೇಶ್ವರ ಸಮುದಾಯ ಭವನದಲ್ಲಿ ಪಟ್ಟಸಾಲಿ ನೇಕಾರ ಮಹಿಳಾ ಸಂಘ ಆಯೋಜಿಸಿದ್ದ ಯುಗಾದಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುಗಾದಿ ಪ್ರತಿವರ್ಷ ಹೊಸದನ್ನು ಪರಿಸರಕ್ಕೆ ಪರಿಚಯಿಸುವಂತೆ ಮಹಿಳೆಯರೂ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಮೂಲಕ ಹೊಸದನ್ನು ತಿಳಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.

ನಮ್ಮದು ಸಂಪ್ರದಾಯ, ಆಚರಣೆಗಳಿಂದ ಕೂಡಿದ ನಾಡು. ಪ್ರತಿಯೊಬ್ಬ ಹಿಂದುಗಳು ಸಂಭ್ರಮದಿಂದ ಯುಗಾದಿ ಆಚರಿಸುತ್ತಾರೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳಾ ಶಕ್ತಿ ಅಪಾರವಾಗಿದೆ. ಮಹಿಳೆಯರು ಸಮಾಜದಲ್ಲಿ ಒಗ್ಗಟ್ಟು ಮೂಡಿಸಬೇಕು. ಆ ಮೂಲಕ ಸಮಾಜವನ್ನು ಪ್ರಗತಿಗೊಳಿಸುವ ಕೆಲಸ ಮಾಡಬೇಕು ಎಂದರು.

ಪಟ್ಟಸಾಲಿ ನೇಕಾರ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಂಘದಿಂದ ಪ್ರತಿವರ್ಷ ಯುಗಾದಿಯನ್ನು ವಿಭಿನ್ನವಾಗಿ ಆಚರಿಸುತ್ತಾ ಬಂದಿದ್ದೇವೆ. ಅದಕ್ಕೆ ಮಹಿಳೆಯರ ಸಹಾಯ, ಸಹಕಾರ ಅಪಾರವಾಗಿದೆ ಎಂದರು.

ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ಬೇವಿ ಬೆಲ್ಲ ವಿತರಿಸಿ ಯುಗಾದಿ ಉತ್ಸವ ಆಚರಿಸಿದರು.

ಸಂಘದ ಉಪಾಧ್ಯಕ್ಷೆ ಗಿರಿಜಾ ಕಲ್ಯಾಣಿ, ಮಾಲಾ ತಾಂಡೂರ (ರಾಜನಾಳ), ಸ್ವರೂಪಾ ಜವಳಿ, ದ್ರಾಕ್ಷಾಯಣಿ ಗೊಬ್ಬಿ, ಶಶಿಕಲಾ ಭಾವಿ, ವೇದಾ ಶೀಪ್ರಿ, ದೀಪಾ ಉಂಕಿ, ಮೀನಾಕ್ಷಿ ಜಿಡಗಿ, ಪ್ರಿಯಾ ಜವಳಿ, ಕಲಾವತಿ ಪಾಗಿ, ಶಕುಂತಲಾ ಉಂಕಿ, ಸುನಂದಾ ರೊಡಗೈ, ಸುವರ್ಣಾ ಬಾಗಲಕೋಟ, ಸಿದ್ದವ್ವ ರೊಡಗೈ, ಶಾಂತಾ ಶೇಖಾ, ಪುಷ್ಪಾ ಪಾಗಿ, ಸುಜಾತಾ ಪಾಗಿ ಇತರರು ಇದ್ದರು.