ವಿಜಯವಾಣಿ ಸುದ್ದಿಜಾಲ ಬೈಂದೂರು
ಸಮಾನ ಸಮಾಜ ಕಟ್ಟುವಲ್ಲಿ ನಾರಾಯಣಗುರುಗಳು ಶ್ರಮಿಸಿದ್ದು, ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸುವ ಆತಂಕ ಎದುರಾಗಿದೆ. ಗುರುಗಳು ಶಿಕ್ಷಣದ ಮೂಲಕ ಸರ್ವ ಸಮಾನ ಸಮಾಜದ ಚಿಂತನೆ ಹುಟ್ಟುಹಾಕಿ, ಸಮಾಜದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅವರ ಸಿದ್ಧಾತ ಎಲ್ಲರೂ ಪಾಲಿಸಬೇಕಾಗಿರುವುದು ಅನಿವಾರ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಾಗೂರಿನಲ್ಲಿ ಬಿಜೆಪಿ ಬೈಂದೂರು ಮಂಡಲ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಸೋಮವಾರ ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಶಿವರಾಜ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ್ ಕೊಡವೂರು, ರಾಜ್ಯ ಉಪಾಧ್ಯಕ್ಷ ವಿಠಲ ಪೂಜಾರಿ, ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್ ಕುಂದಾಪುರ, ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮರ್ ಶೆಟ್ಟಿ, ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ, ಕಾರ್ಯದರ್ಶಿ ಪ್ರಿಯದರ್ಶಿನಿ ಕಮಲೇಶ್, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಮುಖಂಡರಾದ ಈಶ್ವರ್ ನಾಯ್ಕ, ಅರುಣ್ ಬಾಣಾ, ವಿನೋದ್ ಭಂಡಾರಿ, ರತನ್ ರಮೇಶ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ಕೊಠಾರಿ ಸ್ವಾಗತಿಸಿದರು. ಮೋರ್ಚಾ ಕಾರ್ಯದರ್ಶಿ ಮಂಜುನಾಥ ದೇವಾಡಿಗ ವಂದಿಸಿದರು. ರಾಘವೇಂದ್ರ ತಗ್ಗರ್ಸೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಸಾಧಕರನ್ನು ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ ಗಂಟಿಹೊಳೆ ಅವರನ್ನು ಸನ್ಮಾನಿಸಲಾಯಿತು.
ದೇಶದಲ್ಲಿ ಶೇ.50ರಷ್ಟು ಹಿಂದುಳಿದ ವರ್ಗದವರು ಇದ್ದು, ಪ್ರಧಾನಿ ಮೋದಿ ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ‌್ಯದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಹಿಂದುಗಳಿಗೆ ಆಮಿಷವೊಡ್ಡಿ ರಾಜಕೀಯ ಮಾಡುತ್ತಿದೆ. ಮೀಸಲಾತಿ ರದ್ದುಗೊಳಿಸಿ ಮತ್ತಷ್ಟು ತುಳಿಯುವ ತಂತ್ರ ಮಾಡುತ್ತಿದ್ದು ಜನರು ಎಚ್ಚರಿಕೆಯಿಂದರಬೇಕು.-ಕೋಟ ಶ್ರೀನಿವಾಸ ಪೂಜಾರಿ ಸಂಸದ