ದೇವದುರ್ಗ: ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವ ಜತೆಗೆ ಹಲವು ಮಹತ್ವದ ಕಾಮಗಾರಿ ಕೈಗೊಳ್ಳಲು ಅನುಕೂಲವಾಗಿದೆ ಎಂದು ನರೇಗಾ ಯೋಜನೆಯ ಜಂಟಿ ನಿರ್ದೇಶಕ ಕೆಂಪೇಗೌಡ ಹೇಳಿದರು.
ಹೊಸೂರು ಸಿದ್ದಾಪುರ ಗ್ರಾಪಂನಲ್ಲಿ ವಿಶೇಷ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ನರೇಗಾ ಯೋಜನೆಯಡಿ ರೈತರಿಗೆ ಅನುಕೂಲವಾಗಲು ಕೃಷಿ ಹೊಂಡ, ಬದು, ನಾಲೆ, ನಮ್ಮ ಹೊಲ ನಮ್ಮ ರಸ್ತೆ, ಹಳ್ಳದ ಹೂಳು ತೆರವು, ಜಂಗಲ್ ಕಟಿಂಗ್, ಡ್ರಾಪ್ ನಿರ್ಮಾಣ ಮಾಡಬಹುದಾಗಿದೆ ಎಂದರು.
ಬಿಸಿಯೂಟದ ಕೋಣೆ, ಶೌಚಗೃಹ, ಕಾಂಪೌಂಡ್, ಅಂಗನವಾಡಿ ಕೇಂದ್ರ ನಿರ್ಮಾಣಕ್ಕೂ ಅವಕಾಶವಿದೆ. ಕೂಲಿಕಾರರು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿ ಗ್ರಾಪಂನಲ್ಲಿ ಹತ್ತು ದಿನ ವಿಶೇಷ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಲಾಗುತ್ತಿದೆ. ನರೇಗಾ ಯೋಜನೆಯಡಿ 2020-2021, 21-22 ಮತ್ತು 22-23ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿ, 14 ಮತ್ತು 15ನೇ ಹಣಕಾಸು ಯೋಜನೆ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ವಿ.ಪ್ರಕಾಶ, ಸಹಾಯಕ ನಿರ್ದೇಶಕ ಅಣ್ಣರಾವ್, ಪರಿಶಿಷ್ಟ ಪಂಗಡ ಇಲಾಖೆ ನೋಡಲ್ ಅಧಿಕಾರಿ ರಾಘವೇಂದ್ರ, ಕಾರ್ಯಕ್ರಮ ವ್ಯವಸ್ಥಾಪಕ ಬಸವರಾಜ, ಪಿಡಿಒ ಶಂಕರ್, ತಾಂತ್ರಿಕ ಸಹಾಯಕ ಮಹ್ಮದ್ ಸಮದ್, ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ, ಉಪಾಧ್ಯಕ್ಷ ಯಮನೂರು ಸ್ವಾಮಿ ಇತರರಿದ್ದರು.