ವಿಜಯವಾಣಿ ಸುದ್ದಿಜಾಲ ಬೈಂದೂರು
ನಾವು ಬದುಕಲು ಸೇವನೆ ಮಾಡುವ ಆಹಾರದಂತೆ ಶಕ್ತಿ ಸಾನ್ನಿಧ್ಯದ ವೃದ್ಧಿಗೂ ನಿತ್ಯಪೂಜೆ, ಹೋಮ, ಹವನ ಹಾಗೂ ಶೋಡಷೋಪಚಾರ ಮೂಲಕ ಅರ್ಚನೆ ಮಾಡಬೇಕು. ಇದರಿಂದ ಸಮಾಜ ಹಾಗೂ ಪರಿಸರ ಅಭಿವೃದ್ಧಿಯಾಗುತ್ತದೆ ಎಂದು ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀಥ ಸ್ವಾಮೀಜಿ ಹೇಳಿದರು.
ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ ಅವಧಾನಿ ಕುಟುಂಬಸ್ಥರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ದೇವರ ಪುನಃ ಪ್ರತಿಷ್ಠಾಪನೆ ನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸವೃತ್ರ ವ್ಯಾಪಿಸಿದ ದೇವರನ್ನು ಒಂದು ವಿಗ್ರಹರಾಧನೆ ಇನ್ನೊಂದು ಅಗ್ನಿಯ ಮೂಲಕ ಪೂಜಿಸಬಹುದು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಭಕ್ತಿ ನಿಷ್ಠೆಯಿಂದ ಭಗವಂತನನ್ನು ಧ್ಯಾನಿಸಿದಾಗ ಆತ್ಮದ ಎಲ್ಲ ನ್ಯೂನತೆ ಹೋಗಲಾಡಿಸಿಕೊಳ್ಳಲು ಸಾಧ್ಯ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ರಾಜೀವ ಭಟ್ ಮತ್ತು ಪದಾಧಿಕಾರಿಗಳು ಅವಧಾನಿ ಕುಂಟುಂಬದ ಹಿರಿಯರು ಇದ್ದರು. ನಾಯ್ಕನಕಟ್ಟೆ ಯೋಗೀಶ ಭಟ್ ಉಳ್ಳಾಲ ಸ್ವಾಗತಿಸಿ, ಚೇಂಪಿ ಶ್ರೀಕಾಂತ ಭಟ್ ಪ್ರಸ್ತಾವಿಸಿದರು.
ಪೂರ್ಣಕುಂಭ ಸ್ವಾಗತ
ಬೆಳಗ್ಗೆ ದೇವಳ ವತಿಯಿಂದ ಶ್ರೀಗಳನ್ನು ಮಂಗಳವಾದ್ಯ ಹಾಗೂ ಪೂರ್ಣಕುಂಭದ ಮೂಲಕ ಸ್ವಾಗತಿಸಿ ದೇವಳಕ್ಕೆ ಕರೆತರಲಾಯಿತು. ಪ್ರಾತಃಕಾಲ 5ಕ್ಕೆ ಕುಂದಾಪುರ ಜಗದೀಶ ಭಟ್ ಮತ್ತು ವೈದಿಕ ತಂಡದವರಿಂದ ಧಾರ್ಮಿಕ ಕಾರ್ಯ ಆರಂಭಗೊಂಡಿತು. ಗುರುಗಣಪತಿ ಪೂಜನ, ನಿತ್ಯವಿಧಿ, ಆವಾಹಿತ ದೇವತಾ ಪೂಜನ, ಪ್ರತಿಷ್ಠಾಂಗ ತತ್ವಹವನ, ಪ್ರಧಾನ ಹವನ, ಮಹಾಪೂರ್ಣಾಹುತಿ. ಪ್ರಸನ್ನಪೂಜೆ, ಮಂಗಲದ್ರವ್ಯ ನಿರೀಕ್ಷಣೆ, ಪಟ್ಟಕಾಣಿಕೆ, ಪ್ರಸಾದ ವಿತರಣೆ, ಶ್ರೀಗಳಿಗೆ ಅಗ್ರಪೂಜೆ, ಆಶೀರ್ವಚನ, ಫಲಮಂತ್ರಾಕ್ಷತೆ, ಪ್ರತಿಷ್ಠಾಂಗ ಬಲಿಪ್ರದಾನ, ಮಧ್ಯಾಹ್ನ ಮಹಾಪೂಜೆ, ಬ್ರಾಹ್ಮಣ ಪೂಜೆ, ಸಮಾರಾಧನೆ, ಋತ್ವಿಜರಿಗೆ ಸಂಭಾವನೆ, ಮಂಗಲ ಮಂತ್ರಾಕ್ಷತೆ, ಆಶೀರ್ವಾದಗ್ರಹಣ, ಸಂಜೆ ಉಭಯ ದೇವರ ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ಅಲಂಕಾರ ಪೂಜೆ, ಪ್ರಸಾದ ವಿತರಣೆ ನಡೆಯಿತು.
ನಮ್ಮ ಗುರು-ಹಿರಿಯರಿಂದ ಪರಂಪರಾನುಗತವಾಗಿ ಬಂದ ಸಂಸ್ಕಾರ ನಾವು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ದೇವಳದಲ್ಲಿ ನಡೆಯುವ ಪ್ರತಿಯೊಂದು ಉತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾಜದ ಜನರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ದೇವರ ಮತ್ತು ಗುರುಗಳ ಕೃಪೆಗೆ ಪಾತ್ರರಾಗಬೇಕು. -ಶ್ರೀ ಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಕಾಶೀಮಠಾಧೀಶ https://www.vijayavani.net/school-discipline-is-part-of-the-law https://www.vijayavani.net/bus-stop-not-responding-to-demand