ಗಂಗಾವತಿ: ಮುದಾಯದ ಸ್ವಾಸ್ಥ್ಯ ಆರೋಗ್ಯಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮರ್ಪಕ ಅನುಷ್ಠಾನಕ್ಕೆ ಯುವ ವೈದ್ಯರು ನೆರವಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಎಂ.ಇಂದುಮತಿ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಮಹಿಳಾ ವೈದ್ಯರ ಮೈತ್ರಿ ಘಟಕದಿಂದ ಭಾನುವಾರ ಆಯೋಜಿಸಿದ್ದ ಅಂಜನಾ 2023 ರಾಜ್ಯಮಟ್ಟದ ಮಹಿಳಾ ವೈದ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಇಲಾಖೆ ರಾಜ್ಯದಲ್ಲಿ ಎರಡನೇ ಅತಿದೊಡ್ಡ ಇಲಾಖೆಯಾಗಿದ್ದು, ಸ್ವಾಸ್ಥ್ಯ ಆರೋಗ್ಯಕ್ಕಾಗಿ ತಜ್ಞ ವೈದ್ಯರಿಂದ ವೈದ್ಯಕೇತರ ತಂಡ ಲಕ್ಷಕ್ಕೂ ಹೆಚ್ಚು ಸದಸ್ಯರು ಶ್ರಮಿಸುತ್ತಿದ್ದಾರೆ.
ಕ್ಯಾನ್ಸರ್, ಮಧುಮೇಹ, ಕ್ಷಯ, ರಕ್ತದೊತ್ತಡ, ಸಾಂಕ್ರಾಮಿಕ ಸೇರಿ ಹಲವು ರೋಗಗಳ ನಿವಾರಣೆಗೆ 15ಕ್ಕೂ ಹೆಚ್ಚು ಯೋಜನೆಗಳಿದ್ದು, ಕಾರ್ಯಾಗಾರದ ಮೂಲಕ ಜಾಗೃತಿಗೊಳಿಸಲಾಗುತ್ತಿದೆ. ಯುವ ವೈದ್ಯರು ಇಲಾಖೆಯೊಂದಿಗೆ ಕೈ ಜೋಡಿಸುವ ಮೂಲಕ ಇಲಾಖೆಗೆ ನೆರವಾಗಬೇಕಿದ್ದು, ವೈದ್ಯರು ವೃತ್ತಿ ಜತೆಗೆ ಇತರೆ ಚಟುವಟಿಕೆಗಳಲ್ಲೂ ಸಕ್ರಿಯರಾಗಬೇಕು. ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಮೈತ್ರಿ ಘಟಕದ ಅಧ್ಯಕ್ಷೆ ಡಾ. ಮನ್‌ಪ್ರೀತ್ ಕೌರ್ ತೆಹಲಿಯಾ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈತ್ರಿ ಘಟಕ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವೈದ್ಯೆಯರು ವೃತ್ತಿಗೆ ಸೀಮಿತರಾಗದೇ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಇದಕ್ಕೂ ಮುನ್ನ ತಜ್ಞ ವೈದ್ಯರಾದ ಡಾ.ಶಿಲ್ಪಾ ದಿವಟರ್, ಡಾ.ವಿನಯಾಪ್ರಭಾ ಬಳಿಗಾರ್, ಡಾ.ಚಂದನ್ ಕಾಮತ್ ಸೇರಿ ಸಂಪನ್ಮೂಲ ವೈದ್ಯರಿಂದ ಆರ್ಥಿಕ, ಮಕ್ಕಳ ನಿರ್ವಹಣೆ, ಔಷಧ ಬಳಕೆ ಮತ್ತು ಆಹಾರ ಪದ್ಧತಿ ಕುರಿತು ಉಪನ್ಯಾಸ ಜರುಗಿತು.
ಐಎಂಎ ರಾಜ್ಯಾಧ್ಯಕ್ಷ ಡಾ.ಶಿವಕುಮಾರ ಬಿ.ಲಕ್ಕೋಳ್, ನಿಯೋಜಿತ ಅಧ್ಯಕ್ಷ ಡಾ.ವಿ.ವಿ.ಚಿನಿವಾಲರ್, ಐಎಂಎ ತಾಲೂಕು ಅಧ್ಯಕ್ಷ ಡಾ.ಕೆ.ಎನ್.ಮಧುಸೂದನ, ಕಾರ್ಯದರ್ಶಿ ಡಾ.ಮಹಾಂತೇಶ ಪಟ್ಟಣಶೆಟ್ಟಿ, ಖಜಾಂಚಿ ಡಾ.ವಿನಯಗುಂಜಳ್ಳಿ, ಮೈತ್ರಿ ಘಟಕದ ತಾಲೂಕು ಅಧ್ಯಕ್ಷ ಡಾ. ಸುಲೋಚನಾ ಚಿನಿವಾಲರ್, ಕಾರ್ಯದರ್ಶಿ ಡಾ.ಎಸ್.ಜಿ.ಅನಿತಾ, ಖಜಾಂಚಿ ಡಾ.ಸುಲೋಚನಾ ವೆಂಕಟೇಶ ಇತರರಿದ್ದರು. ವೈದ್ಯರಾದ ಡಾ. ಪ್ರಭಾರಾಯ್ಕರ್, ಡಾ.ಉಮಾದೇವಿ ನಿರ್ವಹಿಸಿದರು.
ವೈದ್ಯ ವೃತ್ತಿಯ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಮೈತ್ರಿ ಘಟಕ ಅಸ್ತಿತ್ವಕ್ಕೆ ತಂದಿದ್ದು, ವೈದ್ಯೆಯರಲ್ಲಿನ ಒತ್ತಡ ನಿವಾರಣೆಗೆ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತಿದೆ.
ಡಾ.ಸುಲೋಚನಾ ಚಿನಿವಾಲರ್,
ಮೈತ್ರಿ ಘಟಕದ ತಾಲೂಕು ಅಧ್ಯಕ್ಷೆ