ಬೆಂಗಳೂರು : ಭಾರತ ಯುಎಇ ರಕ್ಷಣಾ ಸಹಭಾಗಿತ್ವದಲ್ಲಿ ಮಹತ್ವದ ಹೆಜ್ಜೆಯಾಗಿ, ಎಡ್ಜ್ ಘಟಕ ಕಾರಾಕಲ್ ಹಾಗೂ ಮೆಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಸಮೂಹ ಗುಂಪಿನ ಐಕಾಮ್ ಟೆಲಿ ಲಿಮಿಟೆಡ್, ಭಾರತ ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್) ಗಾಗಿ 200 ಅತ್ಯಾಧುನಿಕ ಸಿಎಸ್‌ಆರ್ 338 ಸ್ನೈಪರ್ ರೈಫಲ್‌ಗಳನ್ನು ಪೂರೈಸುವ ಅವಕಾಶ ಪಡೆದುಕೊಂಡಿದೆ.
ಈ ಸ್ನೈಪರ್ ರೈಫಲ್‌ಗಳನ್ನು ಹೈದರಾಬಾದ್‌ನಲ್ಲಿರುವ ಐಕಾಮ್ ಕಾರಾಕಲ್ ಸಣ್ಣ ಶಸ್ತ್ರಾಸ್ತ್ರ ಘಟಕದಲ್ಲಿ ತಯಾರಿಸಿ ಹಸ್ತಾಂತರಿಸಲು ಉದ್ದೇಶಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಉದ್ಘಾಟನೆಯಾದ ಈ ಘಟಕವು ಭಾರತೀಯ ಸಶಸ್ತ್ರ ಪಡೆಗಳು ಹಾಗೂ ಕೇಂದ್ರೀಯ ಸಶಸ್ತ್ರ ಪಡೆಗಳಿಗೆ ಶಸ್ತ್ರಾಸ್ತ್ರ ಪೂರೈಕೆಯ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.
ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಸಾಕಾರಗೊಳಿಸಿರುವ ಕಂಪನಿಯು ಯುಎಇ ಭಾರತ ರಕ್ಷಣಾ ಸಹಭಾಗಿತ್ವದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭಾರತದ ಭದ್ರತಾ ಅವಶ್ಯಕತೆಗಳಿಗೆ ಹಾಗೂ ವೃದ್ಧಿಸುತ್ತಿರುವ ರಕ್ಷಣಾ ಕೈಗಾರಿಕೆಗೆ ನಮ್ಮ ದೀರ್ಘಕಾಲಿಕ ಬೆಂಬಲ ನೀಡುವುದಾಗಿ ಕಾರಾಕಲ್ ಸಿಇಒ ಹಮಾದ್ ಅಲಾಮೇರಿ ತಿಳಿಸಿದ್ದಾರೆ.
ಈ ಒಪ್ಪಂದವು ಐಕಾಮ್ ಸಂಸ್ಥೆಗೆ ಹೆಮ್ಮೆಯ ಮೈಲಿಗಲ್ಲಾಗಿದ್ದು, ಭಾರತದ ಸ್ವಾವಲಂಬಿ ರಕ್ಷಣಾ ಸಾರಥ್ಯ ನಿರ್ಮಾಣದ ದೀರ್ಘಕಾಲದ ತಂತ್ರವನ್ನು ದೃಢೀಕರಿಸಿದೆ. ಕಾರಾಕಲ್ ಮತ್ತು ಎಡ್ಜ್ ಜೊತೆಗೆ, ನಾವು ಕೇವಲ ಅತ್ಯಾಧುನಿಕ ಸಿಎಸ್‌ಆರ್-338 ಸ್ನೈಪರ್ ವ್ಯವಸ್ಥೆಯನ್ನು ಪೂರೈಸುವುದಷ್ಟೇ ಅಲ್ಲ, ಜಾಗತಿಕ ಮಟ್ಟದ ತಂತ್ರಜ್ಞಾನವನ್ನು ವರ್ಗಾಯಿಸುತ್ತಿದ್ದೇವೆ. ಹೈದರಾಬಾದ್‌ನಲ್ಲಿ ಗುಣಮಟ್ಟದ ತಯಾರಿಕಾ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ. ಮತ್ತು ಭಾರತದ ರಕ್ಷಣಾ ಕೈಗಾರಿಕಾ ಪರಿಸರವನ್ನು ಬಲಪಡಿಸುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.
ನಿಗದಿತ ಕಾಲಾವಧಿಯೊಳಗೆ ಶಸಾಸಗಳನ್ನು ಪೂರೈಕೆ ಮಾಡುವ ಮೂಲಕ, ಭವಿಷ್ಯದ ಅವಶ್ಯಕತೆ ಅಥವಾ ತಜ್ಞ ಗ್ರಾಹಕರಿಗೆ ಈ ಸಾರಥ್ಯವನ್ನು ವಿಸ್ತರಿಸುವುದಕ್ಕೆ ಸಂಸ್ಥೆ ಬದ್ಧವಾಗಿದೆ. ಎಂದು ಐಕಾಮ್ ಟೆಲಿ ಲಿಮಿಟೆಡ್ ನಿರ್ದೇಶಕ ಸುಮಂತ್ ಪಾಟೂರು ತಿಳಿಸಿದ್ದಾರೆ.
ಭಾರತದಲ್ಲಿ ತಯಾರಿಸಲಾದ ಕಾರಾಕಲ್‌ನ ಮೊದಲ ಸಿಎಸ್‌ಆರ್ 338 ಸ್ನೈಪರ್ ರೈಫಲ್‌ಗಳ ವಿತರಣೆ 2025ರ ನಾಲ್ಕನೇ ತ್ರೈಮಾಸಿಕದಲ್ಲಿ ನಡೆಯಲಿದೆ. ಈ ರೈಫಲ್‌ನಲ್ಲಿ 27 ಇಂಚಿನ ಬ್ಯಾರೆಲ್, 10 ರೌಂಡ್ ಮ್ಯಾಗಜೀನ್, ಆಂಬಿಡೆಕ್ಸ್‌ಟ್ರಸ್ ಮ್ಯಾಗಜೀನ್ ರಿಲೀಸ್ ಮತ್ತು ಭದ್ರತಾ ವ್ಯವಸ್ಥೆ, ಎರಡು ಹಂತಗಳ ನಿಖರ ಟ್ರಿಗರ್ ಮತ್ತು ನಾಲ್ಕು ಸ್ಥಾನಗಳ ದೂರದರ್ಶಕ (ಟೆಲಿಸ್ಕೋಪ್) ಒಳಗೊಂಡಿದೆ ಎಂದು ಐಕಾಮ್ ತಿಳಿಸಿದೆ.