ಜಿಲ್ಲೆ

ಸ್ನೇಹಮಯಿ ಕೃಷ್ಣ, ಬಿಜೆಪಿ ವಿರುದ್ಧ ಪ್ರತಿಭಟನೆ

ಆರ್.ಕೃಷ್ಣ

ಮೈಸೂರು: ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ಸ್ನೇಹಮಯಿ ಕೃಷ್ಣ ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಇದಕ್ಕೆ ಸಹಕರಿಸುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಯುವ ಅಭಿಮಾನಿಗಳ ಬಳಗದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಮುಖವಾಡ ಧರಿಸಿ, ಅವರು ತನಿಖಾ ಸಂಸ್ಥೆಯನ್ನು ಕೈಯಲ್ಲಿ ಹಿಡಿದಿರುವಂತೆ ಅಣಕು ಪ್ರದರ್ಶಿಸಿದರು.

ಸಿದ್ದರಾಮಯ್ಯ ಪರ ಎಂಬ ಬರಹವುಳ್ಳ ಬ್ಯಾನರನ್ನು ಮೈಮೇಲೆ ಧರಿಸಿ ಘೋಷಣೆ ಕೂಗಿದರು. ಅಹಿಂದ ನಾಯಕತ್ವ ಮುಗಿಸಲು ಹೊರಟಿರುವ ಬಿಜೆಪಿಗೆ ಧಿಕ್ಕಾರ, ಸಿದ್ದರಾಮಯ್ಯ ತೇಜೋವಧೆ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರಿಗೆ ಧಿಕ್ಕಾರ ಮುಂತಾದ ಬರಹವುಳ್ಳ ಫಲಕ ಪ್ರದರ್ಶಿಸಿದರು.

ಯುವ ಕಾಂಗ್ರೆಸ್ ಮುಖಂಡ ಎಂ.ಎಸ್. ಶಶಾಂಕ್ ಮಾತನಾಡಿ, ಸಿದ್ದರಾಮಯ್ಯ ಕುಟುಂಬ ಮುಡಾದ ಆಸ್ತಿ ಲೂಟಿ ಹೊಡೆದಿದೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಆದರೆ, ಅವರು ತಾವು ನೀಡಿದ ಜಮೀನಿಗೆ ಬದಲಾಗಿ ನಿವೇಶನ ಪಡೆದಿದ್ದಾರೆ. ಜತೆಗೆ ಲೋಕಾಯುಕ್ತ, ಇಡಿ ತನಿಖೆಗೆ ಸಹಕರಿಸುತ್ತಿದ್ದಾರೆ. ದೂರು ನೀಡಿದವರು ವರದಿ ಬರುವವರೆಗೂ ಕಾಯದೆ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಮದನ್‌ಕುಮಾರ್, ಸಕ್ಲೈನ್, ದಿಲೀಪ್‌ಕುಮಾರ್, ದಿನೇಶ್, ಸುಮಂತ, ಸ್ವಾಮಿ, ಹೊಯ್ಸಳ ಎಂ.ಅರ್, ರವಿಕುಮಾರ್ ಭಾಗವಹಿಸಿದರು.