ಕುಶಾಲನಗರ :
ಫೇಸ್ ಬುಕ್‌ನಲ್ಲಿಯೇ ಕವಿತೆ ಹಾಗೂ ಕಥೆಗಳನ್ನು ಬರೆದುಕೊಳ್ಳುವ ನೂರಾರು ಮಂದಿ ಸಾಹಿತ್ಯಾಸಕ್ತರನ್ನು ಸೇರಿಸಿ ರಚಿಸಿರುವ ಕನ್ನಡ ಬರಹಗಳ ಕೈಪಿಡಿ "ಸ್ನೇಹ ಕೂಟ" ಕನ್ನಡ ಕಥಾಗುಚ್ಛ ಸದಸ್ಯರು ಕಣಿವೆಯ ರಾಮಲಿಂಗೇಶ್ವರ ಸಭಾಂಗಣದಲ್ಲಿ ಭಾನುವಾರ ಒಂದೆಡೆ ಸೇರಿ ಸಂಭ್ರಮಿಸಿದರು.
ಕನ್ನಡ ಕಥಾ ಗುಚ್ಛ ಬರಹಗಳ ಕೈಪಿಡಿ ಜಾಲತಾಣದ ಸಾಹಿತ್ಯ ಬಳಗದ ಸ್ನೇಹ ಕೂಟದ ಸಂಸ್ಥಾಪಕಿ ಲತಾ ಜೋಷಿ ನೇತೃತ್ವದಲ್ಲಿ ಆಗಮಿಸಿದ್ದ ವಿವಿಧೆಡೆಯ ನೂರಾರು ಸಾಹಿತಿಗಳು ಸೇರಿದ್ದ ಕಾರ್ಯಕ್ರಮದಲ್ಲಿ ಕೊಡಗಿನ ಕಲೆ, ಸಂಸ್ಕ್ರತಿ, ಆಚಾರ ವಿಚಾರಗಳನ್ನು ಬಿಂಬಿಸುವ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ ವಿವಿಧ ಜಿಲ್ಲೆಗಳ ಸಾಹಿತ್ಯಾಸಕ್ತರನ್ನು ಸೇರಿಸಿ ಸ್ನೇಹ ಬಳಗ ಕಟ್ಟಿ ಸಾಹಿತ್ಯಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ಸ್ನೇಹ ಕೂಟದ ಅಧ್ಯಕ್ಷೆ ಲತಾ ಜೋಷಿ ಮಾತನಾಡಿ, ವಿವಿಧ ಸಾಹಿತ್ಯ ಪ್ರಾಕಾರಗಳಲ್ಲಿ ಕೃಷಿ ಮಾಡುವ ಬೇರೆ ಬೇರೆ ಜಿಲ್ಲೆಗಳ ಸಹಸ್ರಾರು ಜನರು ಇದರಲಲ್ಲಿ ಸದಸ್ಯರಾಗಿದ್ದಾರೆ. ನಮ್ಮಲ್ಲಿರುವ ಸದಸ್ಯರುಗಳೇ ಬರೆಯುವ ಅರ್ಥಗರ್ಭಿತ ಸಂಗ್ರಹಗಳನ್ನು ಕಲೆ ಹಾಕಿ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತರಲಾಗಿದೆ.
ಸ್ನೇಹ ಕೂಟದ ಸದಸ್ಯರೆಲ್ಲರೂ ಫೇಸ್ ಬುಕ್ ನಲ್ಲಿಯೇ ಚರ್ಚಿಸಿ ತೀರ್ಮಾನಗಳನ್ನು ಕೈಗೊಂಡು ವರ್ಷದಲ್ಲಿ ಎರಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಪ್ರತೀ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸಾಹಿತ್ಯ ಪ್ರವಾಸ ಹಮ್ಮಿಕೊಂಡು ಅಲ್ಲಿನ ಪ್ರಕೃತಿ, ಪರಿಸರ ಹಾಗೂ ಜನಜೀವನದ ಜೊತೆಗೆ ಅಲ್ಲಿನ ಸಾಂಸ್ಕ್ರತಿಕ ವೈಭವಗಳನ್ನು ಅರಿಯುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಕುಶಾಲನಗರ ಕೊಡವ ಸಮಾಜದ ಮಹಿಳೆಯರು ಕೊಡವ ಹಾಡಿಗೆ ನೃತ್ಯ ಪ್ರದರ್ಶಿಸಿದರು.
ಮಿಲನಾ ಭರತ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರೆಭಾಷೆ ಸಂಸ್ಕ್ರತಿ ಸಾರುವ ಸುಗ್ಗಿ ಸುವ್ವಾಲೆ ನೃತ್ಯ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ. ಜಿ. ಅನಂತಶಯನ, ಜಯಶ್ರೀ ಅನಂತಶಯನ, ರಂಜಿತ್ ಹಾಗೂ ಕೌಸರ್ ಅವರಿಂದ ಹುತ್ತರಿ ಹಾಡು, ಕೊಕ್ಕಲೇರಾ ಧರಣಿ ತಂಡದಿAದ ಕನ್ನಡ ಹಾಡು, ಭಾವಗೀತೆ, ಜಾನಪದ ಗೀತೆ ಮೊದಲಾದ ನೃತ್ಯ ಕಾರ್ಯಕ್ರಮಗಳು ನಡೆದವು.
ಕನ್ನಡ ಕಥಾ ಗುಚ್ಛದ ಸಂಘಟಕ ಚಾಮರಾಜನಗರದ ಬಾಹುಬಲಿ ಜಯರಾಜು, ಹಿರಿಯ ಸಂಘಟಕ ಕೆ.ವಿ.ಶಶಿಧರ್, ಆಪ್ತ ಸಲಹೆಗಾರ ಡಿ.ಮಲ್ಲಾರೆಡ್ಡಿ, ಪ್ರಮುಖರಾದ ಗಿರೀಶ್ ಕುಲಕರ್ಣಿ, ಚಂದ್ರಶೇಖರ್, ರಾಘವೇಂದ್ರ ಇನಾಮ್‌ದಾರ್, ಹರೀಶ್ ಕುಮಾರ್ ರಾವ್, ಸುಜಾತ ರೆಡ್ಡಿ, ಇಂಧೂಮಣಿ, ಕೊಡಗಿನ ಸದಸ್ಯರಾದ ನೌಷಧ್ ಜನ್ನತ್, ಇರ್ಫಾನ್ ಹಸನ್ ಕುಟ್ಟಿ, ಸೌಮ್ಯ ಉಮೇಶ್, ಕೃಪಾದೇವರಾಜು, ಹೇಮಂತ್ ಪಾರೆರ, ನೂತನ್ ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಇದ್ದರು.
ಅತಿಥಿಗಳಿಗೆ ಸಾಹಿತಿ ಕಣಿವೆಯ ಭಾರದ್ವಾಜ್ ಕುಟುಂಬ ಬೆಳಗ್ಗೆ ಮತ್ತು ಮಧ್ಯಾಹ್ನದ ಊಟೋಪಚಾರಗಳ ವ್ಯವಸ್ಥೆ ಕಲ್ಪಿಸಿತ್ತು. ಈ ಸಂದರ್ಭ ವೈದ್ಯ ಸೂರ್ಯಕುಮರ್, ಬಿ. ಜಿ. ಅನಂತಶಯನ ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು.