ಜಿಲ್ಲೆ

ಶಾಲೆಯ ಅಡುಗೆ ಕೋಣೆಯಲ್ಲಿ ಹಾವು ಪತ್ತೆ !

ಸೋಮನಾಥ ರೆಡ್ಡಿ

ನರಗುಂದ: ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಅಡುಗೆ ಕೋಣೆಯಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕ ಮೂಡಿಸಿದ ಘಟನೆ ಪಟ್ಟಣದ ಪುರಸಭೆ ಹತ್ತಿರದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ-2ರಲ್ಲಿ ಮಂಗಳವಾರ ನಡೆದಿದೆ.

ಬೆಳಗ್ಗೆ ಎಂದಿನಂತೆ ಪ್ರಾರ್ಥನೆ ಮುಗಿಸಿ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ಬಿಸಿಯೂಟ ನೌಕರರು ಕೊಠಡಿ ಬಾಗಿಲು ತೆಗೆದಾಗ ಹಾವು, ಇಲಿ ನುಗ್ಗುತ್ತಿರುವುದು ಕಂಡು ಬಂದಿದೆ. ಉರಗ ರಕ್ಷಕ ಸುರೇಬಾನ ಅವರು ಸಿಲಿಂಡರ್ ಕೆಳಗಡೆ ತಲೆ ಮರೆಸಿಕೊಂಡಿದ್ದ 2.5 ಅಡಿ ಉದ್ದದ ತೋಳದ ಹಾವು (ಕಾಮನ್ ಉಲ್ಫ್ ಸ್ನೇಕ್) ಅನ್ನು ಹಿಡಿದು ಸುರಕ್ಷಿತವಾಗಿ ಬೇರೆ ಕಡೆ ಬಿಟ್ಟರು.

ಪಾಲಕರ ಆಕ್ರೋಶ: ಬಿಸಿಯೂಟ ತಯಾರಿಸಲು ಅಡುಗೆ ಕೋಣೆಯಲ್ಲಿ ಅಕ್ಕಿ, ಬೇಳೆ, ಸಕ್ಕರೆ, ತರಕಾರಿ, ಮುಂತಾದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದೆ. ಆದರೆ, ಕೊಠಡಿಯಲ್ಲಿ ಸ್ವಚ್ಛತೆ ಕಾಯ್ದುಕೊಂಡಿಲ್ಲ. ಶಾಲೆಯ ಮುಂಭಾಗದಲ್ಲಿ ಚರಂಡಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ನೆಲಹಾಸು (ಪಾಟಿಗಲ್ಲು) ಕೆಳಗಡೆ ಅಲ್ಲಲ್ಲಿ ಸಣ್ಣಪುಟ್ಟ ಗುದ್ದುಗಳು ಬಿದ್ದಿವೆ. ಕೊಠಡಿಯೊಳಗೆ ಅನೈರ್ಮಲ್ಯದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಅಡುಗೆ ಕೋಣೆಯಲ್ಲಿ ಇಲಿ, ಹೆಗ್ಗಣ, ಹಲ್ಲಿ, ಜೇಡರ ಹುಳ ಮುಂತಾದವು ಪತ್ತೆಯಾಗುತ್ತಿವೆ. ಹಾವು ಪತ್ತೆಯಾದಾಗ ನಾಲ್ಕೈದು ನೀರು ಹಾವಿನ ಪರಿಗಳು ಕೂಡ ಕಾಣಿಸಿಕೊಂಡಿದ್ದು ಈ ಜಾಗದಲ್ಲಿ ಆಗಾಗ ಹಾವುಗಳು ಬರುತ್ತವೆ ಎನ್ನುವುದು ಸಾಕ್ಷಿಯಾಗಿದೆ. ಮಕ್ಕಳ ಬಿಸಿಯೂಟದಲ್ಲಿ ತೊಂದರೆಯಾಗುವ ಮೊದಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಅಡುಗೆ ಕೊಠಡಿಗಳನ್ನೂ ಪರಿಶೀಲಿಸಿ ಸ್ವಚ್ಛತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು ಎನ್ನುವುದು ಪಾಲಕರ ಒತ್ತಾಸೆಯಾಗಿದೆ.