ಜಿಲ್ಲೆ

ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಳ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಕೃಷಿಯೇ ಪ್ರಧಾನ ಉದ್ಯೋಗವಾಗಿದ್ದು, ಕಾಫಿ ಪ್ರಮುಖವಾಗಿ ಬೆಳೆಯುತ್ತಾರೆ. ಇಲ್ಲಿನ ಕೃಷಿಕರು ಹೊಲ, ಗದ್ದೆ, ತೋಟಗಳಲ್ಲಿ ದುಡಿಯುವುದರಿಂದ ಹಾವುಗಳೊಂದಿಗೆ ಮುಖಾಮುಖಿ ಸಾಮಾನ್ಯ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದು ಕಂಡುಬರುತ್ತಿದೆ. ಮೂರು ವರ್ಷಗಳಲ್ಲಿ ಹಾವು ಕಡಿತದ ಒಟ್ಟು 628 ಪ್ರಕರಣಗಳು ವರದಿಯಾಗಿದೆ. ನೆಮ್ಮದಿಯ ವಿಷಯ ಎಂದರೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿರುವುದರಿಂದ ಕೇವಲ 2 ಪ್ರಕರಣಗಳಲ್ಲಿ ಮಾತ್ರ ಸಾವು ಸಂಭವಿಸಿದೆ.

ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷ ಸಾಮಾನ್ಯ. ಇತ್ತೀಚಿನ ವರ್ಷಗಳಲ್ಲಂತೂ ಇದು ಹೆಚ್ಚಾಗುತ್ತಲೇ ಇದೆ. ಜಿಲ್ಲೆಯ ಕಾಫಿ ತೋಟ, ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವವರು ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವಂತಾಗಿದೆ. ಆನೆ, ಹುಲಿ, ಕಾಡುಕೋಣ ದಾಳಿಗೆ ಹೆದರಿ ಮಾಲೀಕರು ಇರಲಿ ಕಾರ್ಮಿಕರು ಕೂಡ ತೋಟಗಳಿಗೆ ತೆರಳಲು ಹಿಂದೇಟು ಹಾಕುವುದು ಬಹಳಷ್ಟು ಸಂದರ್ಭಗಳಲ್ಲಿ ಕಂಡುಬರುತ್ತದೆ. ತೋಟ, ಗದ್ದೆಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾಡುಪ್ರಾಣಿಗಳ ದಾಳಿಗೆ ಕಾರ್ಮಿಕರು ಬಲಿಯಾಗುವುದು ಆಗಾಗ್ಗೆ ವರದಿ ಆಗುತ್ತಿರುತ್ತದೆ.

ವನ್ಯಜೀವಿಗಳ ಹಾವಳಿ ಮಧ್ಯೆ ಹಾವು ಕಡಿತ ಪ್ರಕರಣಗಳೂ ಜಿಲ್ಲೆಯಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಪಶ್ಚಿಮ ಘಟ್ಟದ ಸೆರಗಿನಲ್ಲಿ ಇರುವ ಕೊಡಗು ಹಲವು ಜೀವ ವೈವಿಧ್ಯತೆಗಳ ತಾಣ. ಹಾವುಗಳಲ್ಲಿ ಕೂಡ ಸಾಕಷ್ಟು ವೈವಿಧ್ಯಮಯ ಪ್ರಭೇದಗಳನ್ನು ಇಲ್ಲಿ ಕಾಣಬಹುದು. ವಿಷಪೂರಿತ ಮತ್ತು ವಿಷರಹಿರತ ಎರಡೂ ಬಗೆಯ ಹಾವುಗಳು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದೆ. ಇದರಿಂದಾಗಿಯೇ ತೋಟ, ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಆಗಾಗ್ಗೆ ಹಾವುಗಳು ಮುಖಾಮುಖಿ ಆಗುತ್ತಲೇ ಇರುತ್ತದೆ.

ಕಾಫಿ, ಏಲಕ್ಕಿ ತೋಟಗಳಲ್ಲಿ ಎಲೆಗಳ ಮಧ್ಯೆ ಅಡಗಿರುವ, ಮರಗಳ ರೆಂಬೆಗಳಲ್ಲಿ ಆಶ್ರಯ ಪಡೆದಿರುವ ಹಾವುಗಳ ಕೆಲವೊಮ್ಮೆ ಗಮನಿಸಿ ನೋಡದ ಹೊರತು ಗೋಚರ ಆಗುವುದೇ ಇಲ್ಲ. ಹಾಗಾಗಿ ಇಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಅಪಾಯ ಇರುತ್ತದೆ. ಜಿಲ್ಲೆಯಲ್ಲಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಹೆಚ್ಚಿನ ಭಾಗದಲ್ಲಿ ಸಿಹಿಗೆಣಸು ಬೆಳೆಯಲಾಗುತ್ತದೆ. ಸಿಹಿಗೆಣಸಿನ ಬಳ್ಳಿ ದಟ್ಟವಾಗಿ ಬೆಳೆಯುವುದರಿಂದ ಒಳಗಡೆ ತಂಪಿನ ವಾತಾವರಣ ಇರುತ್ತದೆ. ಹಾವುಗಳಿಗೆ ಆಹಾರವಾದ ಇಲಿಗಳೂ ಗೆಣಸಿನ ಬಳ್ಳಿಗಳ ಮಧ್ಯೆ ಆಹಾರಕ್ಕಾ ಅಲೆದಾಡುತ್ತಿರುತ್ತದೆ. ಹಾಗಾಗಿ ಸಿಹಿಗೆಣಸಿನ ಹೊಲದಲ್ಲಿ ಹಾವುಗಳು ಕಂಡುಬರುವುದು ಸಾಮಾನ್ಯವಾಗಿದ್ದು, ಇಲ್ಲೂ ರೈತರು ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇತ್ತೀಚೆಗಷ್ಟೇ ಸೀಗೆಹೊಸೂರು ಗ್ರಾಮದಲ್ಲಿ ಹಸುಗಳಿಗಾಗಿ ಸಿಹಿಗೆಣಸು ಬಳ್ಳಿ ಕತ್ತರಿಸಬೇಕಾದರೆ ಮಹಿಳೆಯೊಬ್ಬರು ಸ್ವಲ್ಪದರಲ್ಲಿ ಹೆಬ್ಬಾವು ಬಾಯಿಯಿಂದ ಪಾರಾದ ಘಟನೆ ನಡೆದಿತ್ತು.

ಹೀಗೆ ತೋಟ, ಗದ್ದೆ, ಹೊಲಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುವ ಸಂದರ್ಭ ಅಚಾನಕ್ಕಾಗಿ ಹಾವು ಕಡಿತ ಪ್ರಕರಣಗಳು ಸಂಭವಿಸಿಬಿಡುತ್ತದೆ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ಹಾವು ಕಡಿತದ 628 ಪ್ರಕರಣಗಳು ವರದಿಯಾಗಿದೆ. ಇದು ಕೇವಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ ಸಂದರ್ಭ ದಾಖಲಾದ ಕಾರಣ ಸಿಕ್ಕಿರುವ ಅಂಕಿ-ಅAಶಗಳು. ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ನಾಟಿ ಔಷಧಿ ಮಾಡಿಸುವವರು ಇದ್ದಾರೆ. ಅಂಥ ಪ್ರಕರಣಗಳು ಇದರಲ್ಲಿ ಸೇರಿಲ್ಲ. ವಿಷಕಾರಿಯಲ್ಲದ ಹಾವು ಕಡಿದ ಸಂದರ್ಭವೂ ಬಹುತೇಕರು ಆಸ್ಪತ್ರೆಗಳಿಗೆ ಬರುವುದಿಲ್ಲ ಎನ್ನುತ್ತಾರೆ ವೈದ್ಯರು.

ವರ್ಷದಿಂದ ವರ್ಷಕ್ಕೆ ಕೊಡಗಿನಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. 2022ರಲ್ಲಿ ಜಿಲ್ಲೆಯ ವಿವಿಧೆಡೆ 134 ಜನರು ಹಾವು ಕಡಿತಕ್ಕೆ ಒಳಗಾಗಿದ್ದರು. 2023ರಲ್ಲಿ ಈ ಸಂಖ್ಯೆ 163 ಆಗಿತ್ತು. ಕಳೆದ ವರ್ಷ 331 ಜನರಿಗೆ ಹಾವು ಕಡಿದಿರುವ ಬಗ್ಗೆ ವಿವರಗಳು ದಾಖಲಾಗಿದೆ. ವಿಶೇಷ ಎಂದರೆ ಸಕಾಲದಲ್ಲಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ತೆಗೆದುಕೊಳ್ಳುವ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿರುವುದರಿಂದ ಹಾವಿ ಕಡಿತದ ಒಟ್ಟು 628 ಪ್ರಕರಣಗಳು ಸಂಭವಿಸಿದರೆ ಇಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. 2022ರಲ್ಲಿ ಒಬ್ಬರು ಮೃತಪಟ್ಟಿದ್ದರೆ, ಕಳೆದ ವರ್ಷವೂ ಒಬ್ಬರು ಹಾವು ಕಡಿತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.

ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಹಾವು ಕಡಿತ ಪ್ರಕರಣವನ್ನು 2024ರ ಫೆ.12ರಂದು ಘೋಷಿತ ಕಾಯಿಲೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಹಾಗಾಗಿ ನೈಜ ಪ್ರಕರಣಗಳಲ್ಲಿ ಏರಿಕೆ ಆಗದಿದ್ದರೂ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೂ ಮೊದಲು ನೈಜ ಪ್ರಕರಣಗಳು ಸಂಭವಿಸಿದರೂ ವಿವಿಧ ಕಾರಣಗಳಿಂದ ಅವು ದಾಖಲಾಗುತ್ತಿರಲಿಲ್ಲ ಎನ್ನುತ್ತದೆ ಆರೋಗ್ಯ ಇಲಾಖೆ ಮೂಲಗಳು.

ರಾಜ್ಯದಲ್ಲಿ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಇತರ ಆರೋಗ್ಯ ಸಿಬ್ಬಂದಿಗೆ ಹಾವು ಕಡಿತದ ಚಿಕಿತ್ಸೆ ಬಗ್ಗೆ ವಿಶೇಷ ತರಬೇತಿ ಕೊಡಲಾಗಿದೆ. ಹಾವು ಕಡಿತಕ್ಕೆ ಕೊಡಲಾಗುವ ಆ್ಯಂಟಿ ಸ್ನೇಕ್ ವೆನಮ್ ಅನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಉಚಿತವಾಗಿಯೇ ಕೊಡಲಾಗುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಯೂ ಇಡಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಕಳೆದ ವರ್ಷದ ಜು.10ಕ್ಕೆ ಅಂತರ್ ಇಲಾಖೆ ಕಾರ್ಯಗಾರವೊಂದನ್ನು ನಡೆಸಿ ಹಾವು ಕಡಿತ ಸಂಬAಧ ಆಯಾಯಾ ಇಲಾಖೆಗಳ ಜವಾಬ್ದಾರಿಗಳ ಬಗ್ಗೆ ಸಂಬAಧಿಸಿದ ಇಲಾಖೆಗಳಿಗೆ ತಿಳಿಸುವ ಕೆಲಸವೂ ಆಗಿದೆ.

ಹಾವು ಕಡಿತದಿಂದ ಆಗುವ ಮರಣದ ಬಗ್ಗೆ ಕಡ್ಡಾಯವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಡೆತ್ ಆಡಿಟ್ ಮಾಡುವಂತೆ ಸರ್ಕಾರದಿಂದ ಸೂಚನೆಯನ್ನೂ ನೀಡಲಾಗಿದೆ. ರಾಜ್ಯದಿಂದ ನೀಡಿರುವ ಜಾಗೃತಿ ಮೂಡಿಸು ಪೋಸ್ಟರ್‌ಗಳು ಮತ್ತು ವಿಡಿಯೋಗಳನ್ನು ಬಳಸಿಕೊಂಡು ಹಾವು ಕಡಿತದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಸಾರ್ವಜನಿಕರಲ್ಲಿ, ಸಮುದಾಯಗಳಲ್ಲಿ ಹಾವು ಕಡಿತದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಸೂಚನೆ ನೀಡಿದೆ.

ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು, ಎನ್‌ಜಿಒಗಳು, ಸಾಂಪ್ರದಾಯಕ ನಾಟಿ ಚಿಕಿತ್ಸಕರು ಹಾಗೂ ಇತರೆ ಸ್ಥಳೀಯ ಮುಖಂಡರು ಒಳಗೊಂಡAತೆ ಅರಣ್ಯ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಇತರೆ ಇಲಾಖೆಗಳ ಸಹಯೋಗದೊಂದಿಗೆ ಜಾಗೃತಿ ಚಟುವಟಿಕೆಗಳನ್ನು ನಡೆಸುವುದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸಮುದಾಯದಲ್ಲಿ ಹಾವು ಕಡಿತದ ಬಗ್ಗೆ ಅರಿವು ಮೂಡಿಸಲು ತಿಳಿಸಿರುವುದರಿಂದ ಹೆಚ್ಚಿನ ಪರಿಣಾಮಗಳು ಉಂಟಾಗಿ ಹಾವು ಕಡಿತದಿಂದ ಆಗುವ ಮರಣದ ಪ್ರಮಾಣದಲ್ಲಿ ಇಳಿಕೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಾವು ಕಚ್ಚಿ ದುರದೃಷ್ಟವಶಾತ್ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ 2 ಲಕ್ಷ ರೂ. ಪರಿಹಾರ ಕೊಡುತ್ತಿದೆ. ಇದನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಹಾವು ಕಡಿತ ಪ್ರಕರಣಗಳು ಸಾಮಾನ್ಯ. ಆದರೆ ಇದಕ್ಕೆ ಚಿಕಿತ್ಸೆ ಇದೆ. ಹಾವು ಕಡಿತಕ್ಕೆ ಒಳಗಾದವರನ್ನು ಕೂಡಲೇ ಆಸ್ಪತ್ರೆಗೆ ಕರೆತರುವ ವ್ಯವಸ್ಥೆ ಮಾಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಔಷಧಿ ನೀಡಲಾಗುತ್ತದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತದ ವಿರುದ್ಧ ಕೊಡುವ ಔಷಧಿಗಳ ದಾಸ್ತಾನು ಇರುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದರೆ ಯಾವುದೇ ಅಪಾಯ ಇರುವುದರಿಲ್ಲ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ