ಹಿರೀಸಾವೆ: ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಮೇಲ್ಸೇತುವೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಪರಿಣಾಮ ಹೋಬಳಿಯ ಬೆಳಗೀಹಳ್ಳಿ ಗ್ರಾಮದ ಶ್ರೀ ಕಂಬದ ನರಸಿಂಹಸ್ವಾಮಿ ದೇವರ ಬಸವ ಸ್ಥಳದಲ್ಲಿಯೇ ಮೃತಪಟ್ಟಿದೆ.
ದೇವರಿಗೆ ಬಿಡುವ ಬವಸ ಒಂದು ಮೃತಪಟ್ಟರೆ ಮತ್ತೊಂದು ಹೋರಿ ಕರುವನ್ನು ತಂದು ಶ್ರೀಕಂಬದ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಬಸವ ಬಿಡುವುದು ಇಲ್ಲಿನ ವಾಡಿಕೆ. ಅದರಂತೆ 20 ವರ್ಷಗಳ ಹಿಂದೆ ಈ ಬಸವನನ್ನು ತಂದು ಪೂಜಿಸಲಾಗಿತ್ತು.
ವರ್ಷಕ್ಕೊಮ್ಮೆ ಶ್ರೀಕಂಬದ ನರಸಿಂಹಸ್ವಾಮಿಯ ಹಬ್ಬದ ದಿನದಂದು ಬಸವನನ್ನು ಅಲಂಕರಿಸಿ ವಿಜೃಂಭಣೆಯಿಂದ ಉತ್ಸವ ಮಾಡಲಾಗುತ್ತಿತ್ತು. ಬೆಳಗಿಹಳ್ಳಿ ಸೇರಿದಂತೆ ಅಕ್ಕ ಪಕ್ಕದ ಊರುಗಳಿಗೆ ಪ್ರತಿದಿನ ತೆರಳುವ ಬಸವ ಸಿಕ್ಕಿದ ಕಡೆ ಮೇವು ತಿಂದು ನೀರು ಕುಡಿದು ಸಂಜೆಯೊಳಗೆ ಹಿಂದಿರುಗಿ ಊರು ಅಥವಾ ಸನ್ನಿಧಿ ಸೇರಿಕೊಳ್ಳುತ್ತಿತ್ತು.
ಆದರೆ ಮಂಗಳವಾರ ಸಮೀಪದ ಹೊನ್ನೇನಹಳ್ಳಿ ಗ್ರಾಮಕ್ಕೆ ತೆರಳಿದ್ದು ರಾತ್ರಿ ಹಿರೀಸಾವೆ ಬಳಿ ಮೇಲ್ಸೇತುವೆಯಲ್ಲಿ ನಡೆದು ಸಾಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಬಸವ ಸ್ಥಳದಲ್ಲಿಯೇ ಮೃತಪಟ್ಟಿದೆ.
ವಿಷಯ ತಿಳಿದು ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಸ್ಥಳಕ್ಕೆ ತೆರಳಿ ವಾಹನದ ಮೂಲಕ ಗ್ರಾಮಕ್ಕೆ ತಂದು ಹೂವು, ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇವರ ಕೊಡುಗೆ ಜಮೀನಿನಲ್ಲಿ ಬುಧವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.