ಸ್ಮಯೋರ್ ಗಣಿ ಸಂಸ್ಥೆಯ ಎಂಡಿ ಬಹಿರ್ಜಿ ಅಜಯ್ ಘೋರ್ಪಡೆ ಅವರು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಕಿಶನ್ ರಡ್ಡಿಯಿಂದ 7ಸ್ಟಾರ್ ರೇಟಿಂಗ್ ಪ್ರಶಸ್ತಿ ಸ್ವೀಕರಿಸಿದರು. ರಾಜಸ್ಥಾನದ ಸಿಎಂ ಭಜನ್‌ಲಾಲ್ ಶರ್ಮಾ, ಸ್ಮಯೋರ್ ಸಂಸ್ಥೆಯ ಉಪಾಧ್ಯಕ್ಷ ಎಂ.ಕೃಷ್ಣರೆಡ್ಡಿ, ಉಪ ಪ್ರಧಾನ ವವ್ಯಸ್ಥಾಪಕ ಡಿ.ಕೆ.ಅನಿಲ್‌ಕುಮಾರ್ ಇದ್ದರು. 
ಜಿಲ್ಲೆ

ಸ್ಮಯೋರ್ ಸಂಸ್ಥೆಗೆ 7ಸ್ಟಾರ್ ರೇಟಿಂಗ್ ಪ್ರಶಸ್ತಿ

ರುದ್ರಪ್ಪ ವಾಲಿ

ಸಂಡೂರು: ಜೈಪುರದ ರಾಜಸ್ಥಾನ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌ನ (ಐಬಿಎಂ) ನಿಂದ ಸಂಡೂರು ಮ್ಯಾಂಗನೀಸ್ ಮತ್ತು ಐರನ್ ಓರ್ಸ್‌ ಲಿಮಿಟೆಡ್‌ನ ಕಮತೂರು ಐರನ್ ಓರ್ಸ್‌ ಮೈನಿಂಗ್ ಲೀಜ್ ಕಂಪನಿಗೆ 2023-24ರ ಪ್ರತಿಷ್ಠಿತ 7 ಸ್ಟಾರ್ ರೇಟಿಂಗ್ ಪ್ರಶಸ್ತಿ ಸೋಮವಾರ ನೀಡಲಾಯಿತು.

ರಾಜಸ್ಥಾನ ಸಿಎಂ ಭಜನ್‌ಲಾಲ್ ಶರ್ಮಾ ಮಾತನಾಡಿ, 2014-15 ಸಾಲಿನಿಂದ ಭಾರತ ಸರಕಾರದ ಗಣಿ ಸಚಿವಾಲಯವು ಉತ್ತಮವಾಗಿ ಕಾರ್ಯನಿರ್ವಹಿಸುವ ಗಣಿ ಸಂಸ್ಥೆಗಳಿಗೆ ಈ ಪ್ರತಿಷ್ಠಿತ 7 ಸ್ಟಾರ್ ರೇಟಿಂಗ್ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿದೆ. ಅಂದಿನಿಂದ ಇಂದಿನವರೆಗೂ ಈ ಪ್ರಶಸ್ತಿಯನ್ನು ಸ್ಮಯೋರ್ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಸತತವಾಗಿ ಈ ಪ್ರಶಸ್ತಿ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇಶದಲ್ಲಿ ಕೇವಲ ಮೂರು ಗಣಿ ಕಂಪನಿಗಳು ಮಾತ್ರ ಈ 7ಸ್ಟಾರ್ ಪ್ರಶಸ್ತಿಗೆ ಆಯ್ಕೆಗೊಂಡಿವೆ. ದಕ್ಷಿಣ ಭಾರತದಿಂದ ಏಕೈಕ ಸ್ಮಯೋರ್ ಗಣಿ ಸಂಸ್ಥೆಯೊಂದೇ ಆಯ್ಕೆಗೊಂಡಿದೆ. ಕೇಂದ್ರ ಗಣಿ ಸಚಿವಾಲಯ ಸ್ಮಯೋರ್ ಸಂಸ್ಥೆಯ ಕಾರ್ಯಾಡಳಿತ, ವೈಜ್ಞಾನಿಕ ಗಣಿಗಾರಿಕೆ, ಸಾಮಾಜಿಕ ಕಾಳಜಿ, ಪರಿಸರ ಸ್ನೇಹಿ, ಅಭಿವೃದ್ಧಿ ಕಾರ್ಯಗಳು, ಉದ್ಯೋಗ, ಸಂಸ್ಥೆಯು ಉತ್ತಮ ಮಟ್ಟದಲ್ಲಿ ಗಣಿಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಈ ಅವಾರ್ಡ್ ನೀಡಿದೆ ಎಂದರು.

ಸ್ಮಯೋರ್ ಗಣಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಅಜಯ್ ಘೋರ್ಪಡೆ ಮಾತನಾಡಿ, ಈ ಬಾರಿಯೂ ನಮ್ಮ ಸಂಸ್ಥೆ ಮೈನಿಂಗ್ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವುದು ಒಂದು ವಿಶೇಷ ಮತ್ತು ಇಂಥ ಪ್ರಶಸ್ತಿಗಳು ಸಂಸ್ಥೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದರು.