ಜಿಲ್ಲೆ

ಆರ್​ಸಿಬಿ ಕಾಲ್ತುಳಿತ ಪ್ರಕರಣ; ಸ್ಮಗ್ಲಿಂಗ್​ ಮಾಫಿಯಾ ಕೈವಾಡ

ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪ

ವಿರಾಟ್​ ಕೊಹ್ಲಿ ಆರೋಪಿಯನ್ನಾಗಿಸಿದ್ದಕ್ಕೆ ವಿರೋಧ

ವಿಜಯವಾಣಿ ಸುದ್ದಿಜಾಲ ಉಡುಪಿ

ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸ್ಮಗ್ಲಿಂಗ್​ ಮಾಫಿಯಾದವರ ಕೈವಾಡವಿದೆ. ಆದರೆ, ಘಟನೆಗೆ ಸಂಬಂಧಿಸಿ ರಾಜ್ಯ ಕಾಂಗ್ರೆಸ್​ ಸರ್ಕಾರ ಉಚ್ಚ ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ಕ್ರಿಟರ್​ ವಿರಾಟ್​ ಕೊಹ್ಲಿ ಅವರನ್ನು ಮೇಲ್ನೋಟಕ್ಕೆ ಆರೋಪಿಯನ್ನಾಗಿಸಿದ್ದಾರೆ. ಆ ವರದಿಯನ್ನು ನಾನು ವಿರೋಧಿಸುತ್ತೇನೆ. ಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಪರಾಧಿ ಎಂದು ಮಾಜಿ ಡಿವೈಎಸ್ಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್​ನ ಅಧ್ಯಕ್ಷೆ ಅನುಪಮಾ ಶೆಣೈ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಜುಲೈ 19ರಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ಖಂಡಿಸುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ ಕ್ಷಮೆ ಯಾಚಿಸಲಿ

ಸರ್ಕಾರ ನೀಡಿರುವ ವರದಿಯ ಪ್ರಕಾರ ವಿರಾಟ್​ ಕೊಹ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಡಿಯೋವನ್ನು ಸುಮಾರು 16 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದು, ಅವರೆಲ್ಲರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರಿಂದ ಕಾಲ್ಕುಳಿತವಾಯಿತು ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆರ್​ಸಿಬಿಯ ಒಂದು ಟ್ವೀಟ್​ಗೆ 16 ಲಕ್ಷ ವ್ಯೂವ್ಸ್​ ಬಂದಿದೆ. ಎರಡನೇ ಟ್ವೀಟ್​ಗೆ 7.6 ಲಕ್ಷ ಹಾಗೂ 3ನೇ ಟ್ವೀಟ್​ಗೆ 17 ಲಕ್ಷ ಜನರು ನೋಡಿದ್ದಾಗಿ ಹೇಳಲಾಗಿದೆ. ಆ ವರದಿಯನ್ನು ಕೂಡಲೇ ಹಿಂಪಡೆದು, ಸಿದ್ದರಾಮಯ್ಯ ಅವರು ವಿರಾಟ್​ ಕೊಹ್ಲಿ ಹಾಗೂ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ನನ್ನ ಪ್ರಶ್ನೆಗೆ ಸಿಎಂ ಉತ್ತರಿಸಲಿ

ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಮೆಸೆಜ್​ಗಳನ್ನು ದೇಶ-ವಿದೇಶಗಳಿಂದ ಲಕ್ಷಾಂತರ ಜನರು ನೋಡುತ್ತಾರೆ. ಪೋಸ್ಟ್​ ನೋಡಿದ ಎಲ್ಲರೂ ಒಂದೇ ದಿನದಲ್ಲಿ ವಿಮಾನ ಹತ್ತಿ ಬೆಂಗಳೂರಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆಯೇ? ಸಾಮಾಜಿಕ ಜಾಲತಾಣಗಳ ಕಚೇರಿಯಿಂದ ಆ ಲಕ್ಷಾಂತರ ವ್ಯೂವ್ಸ್​ ಮಾಡಿದ ಜನರ ಮಾಹಿತಿ ಪಡೆದು ಅವರೆಲ್ಲರೂ ಆ ಕಾರ್ಯಕ್ರಮದ ಸ್ಥಳದಲ್ಲಿ ಇದ್ದ ಬಗ್ಗೆ ಸಿದ್ಧರಾಮಯ್ಯ ಪರಿಶೀಲನೆ ಮಾಡಿದ್ದಾರೆಯೇ? ಈ ಪ್ರಶ್ನೆಗೆ ಸಿಎಂ ಉತ್ತರಿಸಬೇಕು ಎಂದು ಅನುಪಮಾ ಆಗ್ರಹಿಸಿದರು.

ಬೆಂಗಳೂರು ಡಿಸಿಗೆ 8 ಪುಟಗಳ ಪತ್ರ

ಸರ್ಕಾರ ತನ್ನ ವೈಲ್ಯವನ್ನು ಮುಚ್ಚಿಕೊಳ್ಳಲು ಕರ್ತವ್ಯ ನಿರತ ಐವರು ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಘಟನೆಯ ಹೊಣೆಯಾಗಿಸಿದ್ದಾರೆ. ತನ್ನದೇ ಇಲಾಖೆಯ ಅಧಿಕಾರಿಗಳನ್ನು ಐಜಿಪಿ ಸಲೀಂ ಅವರೇ ಅಮಾನತುಗೊಳಿಸಿದ್ದಾರೆ. ಆ ಬಗ್ಗೆ ಮ್ಯಾಜಿಸ್ಟ್ರೆಟ್​ ವಿಚಾರಣೆ ಮಾಡುತ್ತಿರುವ ಬೆಂಗಳೂರು ನಗರದ ಜಿಲ್ಲಾಧಿಕಾರಿ ಜಗದೀಶ ಅವರಿಗೆ ಆರ್​ಸಿಬಿ ಕಾಲ್ತುಳಿತ ಘಟನೆಗೆ ಕಾರಣ ಆಗಿರಬಹುದಾದ ಅಂಶಗಳ ಕುರಿತು 8 ಪುಟಗಳ ಪತ್ರ ಬರೆದಿದ್ದೇನೆ. ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ಸ್ಮಗ್ಲಿಂಗ್​ ಮಾಫಿಯಾವೊಂದು ಮುಂದಿನ ಡಿಜಿಪಿ ಮತ್ತು ಐಜಿಪಿಯಾಗಿ ದಯಾನಂದ ಅವರು ನೇಮಕವಾಗುವುದನ್ನು ತಡೆಯುವ ಉದ್ದೇಶವಿದೆ. ಸ್ಮಗ್ಲಿಂಗ್​ ದಂಧೆಗೆ ತೊಂದರೆಯಾಗದಂತೆ ಸಲೀಂ ಅವರನ್ನು ನೇಮಿಸಲಾಗಿದೆ. ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯ ಗುಂಪು ಗಲಭೆಕೋರರ ಸಹಾಯ ಪಡೆದು ಸ್ಥಳದಲ್ಲಿ ಗೊಂದಲ ಸೃಷ್ಟಿಸಿ ಕಾಲ್ತುಳಿತಕ್ಕೆ ಕಾರಣವಾಗಿದೆ. ಆ ಕುರಿತ ಅನೇಕ ಮಾಹಿತಿ ವಿವರಿಸಿದ್ದೇನೆ ಎಂದು ಅನುಪಮಾ ತಿಳಿಸಿದರು.

ಆರ್​ಸಿಬಿ ಪರ ವಕೀಲರು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ನನ್ನ ಪತ್ರದ ಪ್ರತಿಯನ್ನು ಪಡೆದು ಪರಿಶೀಲಿಸಿ ಆರೋಪದಿಂದ ವಿರಾಟ್​ ಕೊಹ್ಲಿ ಅವರನ್ನು ರಕ್ಷಿಸಬೇಕು. ಡಿಸಿ ಜಗದೀಶ ಅವರು ಪತ್ರ ನೀಡಲು ನಿರಾಕರಿಸಿದರೆ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ನಾನು ನೀಡಿದ ಪತ್ರದಿಂದ ವಿರಾಟ್​ ಕೊಹ್ಲಿ ದೋಷಮುಕ್ತರಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ಅಲ್ಲದೆ, ಹೈಕೋರ್ಟ್​ ಸಹ ಆ ವರದಿಯನ್ನು ಸಾರ್ವಜನಿಕಗೊಳಿಸಲು ಆದೇಶ ಮಾಡಿದೆ. ಸರ್ಕಾರದ ಆಡಳಿತ ವೈಖರಿ ಪಾರದರ್ಶಕವಾಗಿರಬೇಕು ಎಂದು ಸೂಚಿಸಿದ್ದಕ್ಕೆ ನ್ಯಾಯಾಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ. | ಅನುಪಮಾ ಶೆಣೈ. ಮಾಜಿ ಡಿವೈಎಸ್ಪಿ