ಸೋಮವಾರಪೇಟೆ : ತೋಳೂರು ಶೆಟ್ಟಳ್ಳಿ ಸಮುದಾಯಭವನದಲ್ಲಿ ಜಿಲ್ಲಾ ರಕ್ತನಿಧಿಕೋಶ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಆಯುಷ್ಮಾನ್ ಆರೋಗ್ಯ ಮಂದಿರ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯವಂತರು 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನದಿಂದ ಎರಡು ಜೀವಗಳನ್ನು ಉಳಿಸಿದ ಸಾರ್ಥಕತೆ ದೊರಕುತ್ತದೆ. ದಾನಿಗಳ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು. ರಕ್ತದಾನದಿಂದ ನಾವು ಅನೇಕ ರೋಗಗಳಿಂದಲೂ ಮುಕ್ತವಾಗಬಹುದು ಎಂದ ಅವರು, ಹಿಂದೆಲ್ಲ ಮೂಢನಂಬಿಕೆ ಮತ್ತು ಭಯದಿಂದ ರಕ್ತದಾನ ಮಾಡುತ್ತಿರಲಿಲ್ಲ. ಈಗ ಗ್ರಾಮೀಣ ಭಾಗದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ರಕ್ತದಾನ ಮಾಡುತ್ತಿದ್ದಾರೆ. ದಾನ ಮಾಡಿದರೆ ಒಂದೆರಡು ದಿನಗಳಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಈ ಬಗ್ಗೆ ಜನ ಜಾಗೃತಿ ಹೆಚ್ಚಾಗಬೇಕಿದೆ ಎಂದರು.
ಜಿಲ್ಲಾಸ್ಪತ್ರೆಗೆ ಪ್ರತಿ ತಿಂಗಳು 500 ಯೂನಿಟ್ ರಕ್ತ ಬೇಕು. ಗರ್ಭಿಣಿಯರು, ಬಾಣಂತಿಯರು, ರಕ್ತಹೀನತೆಯಿಂದ ಬಳಲುತ್ತಿರುವವರು, ಅಪಘಾತಕ್ಕೆ ಒಳಗಾದವರ ಜೀವ ಉಳಿಸಲು ರಕ್ತ ಬೇಕು. ರಕ್ತಕ್ಕೆ ಯಾವ ಪರ್ಯಾಯ ವ್ಯವಸ್ಥೆಯೂ ಇಲ್ಲ. ದಾನಿಗಳೇ ಕೊಡಬೇಕು ಎಂದು ಹೇಳಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಕ್ಷಯ ರೋಗ ನಿರ್ಮೂಲನೆಗೆ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಗ್ರಾಮೀಣ ಭಾಗದ 35 ಜನ ರಕ್ತದಾನ ಮಾಡಿದರು. ಗ್ರಾಪಂ ಅಧ್ಯಕ್ಷೆ ಭವಾನಿ, ಸದಸ್ಯರಾದ ಆರತಿ, ದಿವ್ಯಾ, ಮೋಹಿತ್, ನವೀನ್, ರುದ್ರಪ್ಪ, ವೈದ್ಯಾಧಿಕಾರಿ ಚಾರುಲತಾ, ಪಿಡಿಒ ಮನಮೋಹನ್, ಲಯನ್ಸ್ ಅಧ್ಯಕ್ಷ ಶಿವಕುಮಾರ್ ಇತರರು ಇದ್ದರು. ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ರಕ್ತದಾನ ಮಾಡಿದರು.