ಸೋಮವಾರಪೇಟೆ : ಐಗೂರು-ಕಿರಗಂದೂರು ಮತ್ತು ಕಿರಗಂದೂರು-ಹರಗ ಸಂಪರ್ಕ ರಸ್ತೆಯ ಆಯ್ದ ಕಡೆಗಳಲ್ಲಿ ಕಾಂಕ್ರೀಟ್ ಮಾರ್ಗ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಶುಕ್ರವಾರ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಕಳೆದ ಹಲವು ತಿಂಗಳ ಹಿಂದೆಯೇ ರಸ್ತೆ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಮೇ ಕೊನೇ ವಾರದಲ್ಲಿಯೇ ಭಾರೀ ಮಳೆಯಾದ್ದರಿಂದ ಭೂಮಿ ಪೂಜೆ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಮಳೆ ಕಡಿಮೆಯಾಗಿದೆ. ಕಾಮಗಾರಿ ಗುಣಮಟ್ಟ ಪಾಲನೆಗೆ ಸೂಚನೆ ನೀಡಲಾಗಿದೆ ಎಂದರು.
ಗ್ರಾಮದ ಪ್ರಮುಖರಾದ ಎಸ್.ಎಂ. ಚಂಗಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಅಕ್ರಮ- ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್, ತಾಲೂಕು ಕೆಡಿಪಿ ಸಮಿತಿ ಸದಸ್ಯೆ ಸಬಿತಾ ಚನ್ನಕೇಶವ ಸೇರಿದಂತೆ ಇತರರು ಇದ್ದರು.