ಮದ್ದೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರು ಅತ್ಯುತ್ತಮ ಸಂಸದೀಯ ಪಟುವಾಗುವ ಜತೆಗೆ ರಾಜಕೀಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಜನ ಮಾನಸದಲ್ಲಿ ಉಳಿಯುವಂತ ಹಲವಾರು ಯೋಜನೆಗಳನ್ನ ನೀಡಿದ್ದಾರೆ ಎಂದು ಟೌನ್ ಕ್ಲಬ್ ಮದ್ದೂರು ಅಧ್ಯಕ್ಷ ಡಾ.ಕೃಷ್ಣ ಸ್ಮರಿಸಿದರು.
ಪಟ್ಟಣದ ಟೌನ್ ಕ್ಲಬ್‌ನಲ್ಲಿ ಶನಿವಾರ ಟೌನ್ ಕ್ಲಬ್ ಮದ್ದೂರು, ಚುಂಚಶ್ರೀ ಗೆಳೆಯರ ಬಳಗ ಹಾಗೂ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬಿಸಿ ಊಟ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರ್ಥಿಕ ಸ್ತ್ರೀ ಶಕ್ತಿ ಸ್ವಸಾಯ ಸಂಘ, ವಿಕಾಸ ಸೌಧ, ಉದ್ಯೋಗ ಸೌಧ ಸೇರಿದಂತೆ ಹಲವಾರು ಕೊಡುಗೆಗಳನ್ನು ರಾಜ್ಯಕ್ಕೆ ನೀಡುವ ಮೂಲಕ ರಾಜಕೀಯದಲ್ಲಿ ಉತ್ತುಂಗ ಸ್ಥಾನಕ್ಕೇರಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ರಾಜಕೀಯ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದ ದೇಶದ ಏಕೈಕ ವ್ಯಕ್ತಿ ಎಂದರೆ ಅದು ಎಸ್.ಎಂ.ಕೃಷ್ಣ ಎಂದು ಪ್ರಸಂಸೆ ವ್ಯಕ್ತ ಪಡಿಸಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಸ್ವಚ್ಛ ಹಾಗೂ ಸಂಭಾವಿತ ರಾಜಕಾರಣಿಯಾಗಿ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೋಯ್ದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಮುಖಂಡರಾದ ಸಿದ್ದರಾಮಣ್ಣ ದೇಶಹಳ್ಳಿ ಪಿ.ಶಿವಪ್ಪ, ಸಿ.ಕೆ.ರಾಮಕೃಷ್ಣ, ಚನ್ನಯ್ಯ, ಶಂಕರಯ್ಯ, ದೊರೆಸ್ವಾಮಿ, ವೀರಣ್ಣ, ವಿ.ಟಿ.ರವಿಕುಮಾರ್, ರಾಮಸ್ವಾಮಿ, ಕೃಷ್ಣ, ಚಂದ್ರು, ವೀರಭದ್ರ, ಜಗದೀಶ್, ನಾಗಾನಂದ ಇತರರು ಇದ್ದರು.