* ರಾಮನಗರದ ಪ್ರವಾಸಿ ಮಂದಿರದಲ್ಲಿಯೇ ಸಂಪುಟ ಸಭೆ
* ಮಂಡ್ಯ ಚುನಾವಣಾ ಪ್ರಚಾರದಲ್ಲಿ ಚನ್ನಪಟ್ಟಣದ ಹಲವು ಮುಖಂಡರು
ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯ ಕಂಡ ಮುತ್ಸದ್ದಿ ರಾಜಕಾರಣ ಎಸ್.ಎಂ.ಕೃಷ್ಣ ಅವರಿಗೆ ಹಿಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ಈಗಿನ ರಾಮನಗರ ಜಿಲ್ಲೆಯೊಂದಿಗೆ ಅವಿನಾ‘ವ ಸಂಬಂಧ ಬೆಸೆದುಕೊಂಡಿತ್ತು.
ತಮ್ಮೂರು ಮದ್ದೂರಿಗೆ ಹೋಗುವ ಮಾರ್ಗದಲ್ಲಿಯೇ ಸಿಗುವ ರಾಮನಗರ, ಚನ್ನಪಟ್ಟಣದ ಜನತೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಎಸ್‌ಎಂಕೆ, ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಮಾರ್ಗದರ್ಶಕರಾಗಿ ಅವರನ್ನು ಮೇಲಕ್ಕೆ ಎತ್ತಿದ ಕೀರ್ತಿಯನ್ನು ಹೊಂದಿದ್ದಾರೆ. ಜಿಲ್ಲೆಯ ಬಹುತೇಕ ರಾಜಾಕಾರಣಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗುವ ಮುನ್ನ, ಮತ್ತು ನಂತರವೂ ಜಿಲ್ಲೆಯ ಪ್ರಮುಖರೊಂದಿಗೆ ಸಂಪರ್ಕದಲ್ಲಿ ಇದ್ದರು.
ರಾಜ್ಯದ ಮುಖ್ಯಮಂತ್ರಿ ಆಗಿ 1999ರಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದ ಎಸ್.ಎಂ ಕೃಷ್ಣ ಅವರಿಗೆ ಪ್ರಕೃತಿ ಸಹಕಾರ ನೀಡಲೇ ಇಲ್ಲ. ನಿರಂತರ ಬರ ಇವರ ಆಡಳಿತಕ್ಕೆ ಸವಾಲನ್ನು ತಂದೊಡ್ಡಿತ್ತು. ಇದರ ನಡುವೆ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆದು ಕೆಆರ್‌ಎಸ್‌ನಿಂದ ನೀರು ಬಿಡಬೇಕು ಎಂದು ಕೋರ್ಟ್ ಮೂಲಕ ಹೇಳಿಸಿತ್ತು. ಆದರೆ ಸತತ ಬರದಿಂದ ಕಂಗೆಟ್ಟಿದ್ದ ರಾಜ್ಯದಿಂದ ನೀರು ಹರಿಸಲು ಸಾಧ್ಯವೇ ಇರಲಿಲ್ಲ. ಇಂತಹ ಸಂಧರ್ಭದಲ್ಲಿ 2002ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಕೆಆರ್‌ಎಸ್‌ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕೆ ರಾಮನಗರದ ಪ್ರವಾಸಿ ಮಂದಿರಲ್ಲಿಯೇ ಸಂಪುಟ ಸಭೆ ನಡೆಸುವ ಮೂಲಕ ಆಡಳಿತ ಕಾಳಜಿಯನ್ನು ಪ್ರದರ್ಶನ ಮಾಡಿದ್ದರು.
ಮೊದಲ ದಿನ ಬಿಡದಿಯಲ್ಲಿ ತಂಗಿದ್ದ ಎಸ್. ಎಂ. ಕೃಷ್ಣ ನೇತೃತ್ವದ ಪಾದಯಾತ್ರೆ ತಂಡ, ಎರಡನೇ ದಿನ ರಾಮನಗರದ ಐಬಿಯಲ್ಲಿ ಬೀಡು ಬಿಟ್ಟಿತ್ತು. ಮೂರನೇ ದಿನ ಮುಂಜಾನೆ ಪಾದಯಾತ್ರೆ ಹೊರಡುವ ಮುನ್ನ ರಾಮನಗರದಲ್ಲಿ ಸಂಪುಟ ಸಭೆಯನ್ನು ನಡೆಸುವ ಮೂಲಕ ಆಡಳಿತ ಹಳಿ ತಪ್ಪದಂತೆ ನೋಡಿಕೊಂಡಿದ್ದರು. ನಂತರ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಪಾದಯಾತ್ರೆ ಮೊಟಕುಗೊಳಿಸಿ, ತಮಿಳು ನಾಡಿಗೆ ನೀರು ಹರಿಸಿದ್ದರು.
ವಿದೇಶದಲ್ಲಿ ವ್ಯಾಸಂಗ ಮುಗಿಸಿ ಬಂದಿದ್ದ ಎಸ್. ಎಂ. ಕೃಷ್ಣ ಅಂದು ಮತ್ತು ಎಂದೆಂದಿಗೂ ಸ್ಟೈಲಿಷ್ ರಾಜಕಾರಣಿಯಾಗಿಯೇ ಬದುಕು ಸಾಗಿಸಿದವರು. ಮದ್ದೂರಿಗೆ ಹೊಂದಿಕೊಂಡಂತೆ ಚನ್ನಪಟ್ಟಣ ಇರುವ ಕಾರಣ ಬೆಂಗಳೂರಿನಿಂದ ಮದ್ದೂರಿಗೆ ತಮ್ಮ ಕಾರಿನಲ್ಲಿ ಹೋಗುವ ವೇಳೆ ಚನ್ನಪಟ್ಟಣದ ಹಲವು ಗ್ರಾಮಗಳ ಬಳಿ ಕಾರು ನಿಲ್ಲಿಸಿ ಸ್ಥಳೀಯ ಮುಖಂಡರನ್ನು ಮಾತನಾಡಿಸಿಕೊಂಡೇ ಹೋಗುತ್ತಿದ್ದರು. ಚನ್ನಪಟ್ಟಣದ ಹಲವು ಗ್ರಾಮಗಳಿಂದ ಹಲವಾರು ಮುಖಂಡರು ಎಸ್. ಎಂ. ಕೃಷ್ಣ ಪರವಾಗಿ ಮದ್ದೂರು, ಮಂಡ್ಯದಲ್ಲಿ ಚುನಾವಣಾ ಪ್ರಚಾರ ಮಾಡಿದ್ದಾರೆ.
ಎಸ್. ಎಂ. ಕೃಷ್ಣ ಅವರಿಗೆ ಅಪ್ಪುಗೆ ನೀಡಿರುವ ಜಿಲ್ಲೆಯಲ್ಲಿ, ನೀರಾ ಗೋಲಿಬಾರ್ ಕಪ್ಪು ಚುಕ್ಕೆಯನ್ನು ಅಂಟಿಸಿತ್ತು. ಮಧ್ಯದ ಲಾಬಿಗೆ ಮಣಿದು ನುಸಿ ಪೀಡಿತ ತೆಂಗಿನ ಮರದಿಂದ ನೀರಾ ಇಳಿಸಲು ಅಂದಿನ ಎಸ್. ಎಂ. ಕೃಷ್ಣ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಆರಂಭಗೊಂಡ ಹೋರಾಟ, ವಿಠಲೇನಹಳ್ಳಿಯಲ್ಲಿ ರೈತರಿಬ್ಬರು ಗೋಲಿಬಾರ್‌ಗೆ ಬಲಿಯಾಗುವ ಮೂಲಕ ಉಗ್ರ ರೂಪವನ್ನೇ ಪಡೆದುಕೊಂಡಿತು. ನಂತರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ 2001ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೊಡೆತಟ್ಟಿ ಬೆಂಗಳೂರಿಗೆ 80 ಕಿಮೀ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಇದಾದ ಮೇಲೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳ ಬಲ ಪ್ರದರ್ಶನವೂ ನಡೆಯಿತು.
ಎಸ್.ಎಂ.ಕೃಷ್ಣ ಅವರ ರಾಜಕೀಯ ಜೀವನ ಆರಂಭಗೊಂಡಿದ್ದೇ ಚನ್ನಪಟ್ಟಣ ಮೂಲದ ರಾಜಕಾರಣಿ ವಿರುದ್ಧದ ಹೋರಾಟದ ಮೂಲಕ. 1951, 1952, 1957ರಲ್ಲಿ ಮದ್ದೂರಿನಲ್ಲಿ ಶಾಸಕರಾಗಿದ್ದ ಎಚ್.ಕೆ.ವೀರಣ್ಣಗೌಡ ಅವರು ಮೂಲತಃ ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಳ್ಳಿ ಅವರು. ಮದ್ದೂರಿನಲ್ಲಿ ಗಟ್ಟಿ ನೆಲೆ ನಿರ್ಮಿಸಿಕೊಂಡಿದ್ದ ವೀರಣ್ಣಗೌಡರನ್ನು 1962ರ ಚುನಾವಣೆಯಲ್ಲಿ ಎದುರಿಸಿದ ಎಸ್. ಎಂ. ಕೃಷ್ಣ ಆಯ್ಕೆ ಆಗುವ ಮೂಲಕ ವಿಧಾನಸಭೆ ಪ್ರವೇಶ ಮಾಡಿ ರಾಜಕೀಯ ಬದುಕಿನ ಮೊದಲ ಹೆಜ್ಜೆ ಇಟ್ಟಿದ್ದರು.
ಎಸ್. ಎಂ. ಕೃಷ್ಣ ರಾಜ್ಯದ ಅಭಿವೃದ್ಧಿಗೆ ವೇಗ ನೀಡಿದ ಮಹಾನ್ ಆಡಳಿತಗಾರ. ಆಡಳಿತದಲ್ಲಿ ತಮ್ಮದೇ ದೂರ ದೃಷ್ಟಿತ್ವ ಹೊಂದಿದ್ದರು. ಅವರ ಕಲ್ಪನೆಯ ಫಲವೇ ಈಗ ಬೆಂಗಳೂರಿನ ಅಭಿವೃದ್ಧಿ. ಇದರ ಹೊರತಾಗಿ ಅವರೊಬ್ಬ ಹಾಸ್ಯ ಪ್ರಜ್ಞೆಯುಳ್ಳ ಉತ್ತಮ ಆಡಳಿತಗಾರ. ಅವರ ಪಾಂಚಜನ್ಯ ಯಾತ್ರೆಗೆ ನಾನು ಕೃಷ್ಣ ಪಾತ್ರಧಾರಿ ಆಗಿದ್ದು ನನ್ನ ಸುದೈವ. ಸಿ ಎಂ.ಲಿಂಗಪ್ಪ, ಮಾಜಿ ಶಾಸಕನನ್ನ ರಾಜಕೀಯ ಬೆಳವಣಿಗೆಯಲ್ಲಿ ಎಸ್. ಎಂ. ಕೃಷ್ಣ ಅವರ ಪಾತ್ರವೂ ಹಿರಿದಾಗಿದೆ. ಚನ್ನಪಟ್ಟಣದಲ್ಲಿ ನಾನು ಮಾಡಿದ್ದ ನೀರಾವರಿ ಯೋಜನೆಯನ್ನು ಮೆಚ್ಚಿ, ನಂತರ ಮದ್ದೂರಿನ ಕೆಲವು ಗ್ರಾಮಗಳ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆಯನ್ನು ಎಸ್. ಎಂ. ಕೃಷ್ಣ ಅವರು ನೀಡಿದ್ದರು. ಸಿ.ಪಿ.ಯೋಗೇಶ್ವರ್, ಶಾಸಕ,ಚನ್ನಪಟ್ಟಣ