ಬಿಡದಿ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಪಟ್ಟಣದ ಬಿಜಿಎಸ್ ಸರ್ಕಲ್ಗೆ ಬುಧವಾರ ಬೆಳಗ್ಗೆ ಆಗಮಿಸಿದ್ದ ವೇಳೆ ತಾಲೂಕಿನ ಜನತೆ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಸಮೀಪದ ಬಿಜಿಎಸ್ ವೃತ್ತದಲ್ಲಿ ಜಿಲ್ಲಾಡಳಿತದಿಂದ ಸಾರ್ವಜನಿಕರು ಅಂತಿಮ ದರ್ಶನ ಪಡೆಯಲು ಸಕಲ ಸಿದ್ಧತೆ ಮಾಡಿದ್ದರು.
ಕುಂಬಳಗೂಡುವಿನಿಂದ ಬಿಡದಿ ಮಾರ್ಗಮಧ್ಯೆ ಅಲ್ಲಲ್ಲಿ ಜನರು ಅಂತಿಮ ದರ್ಶನ ಪಡೆಯಲು ಹೆದ್ದಾರಿ ಪಕ್ಕದಲ್ಲಿ ನಿಂತಿದ್ದರು. ಕೇತುಗಾನಹಳ್ಳಿ ಗೇಟ್ ಸಮೀಪ ಐಕಾನ್ ಕಾಲೇಜಿನ ವಿದ್ಯಾರ್ಥಿಗಳೂ ಹೆದ್ದಾರಿಯಲ್ಲಿ ಕಾದುನಿಂತು ಅಂತಿಮ ನಮನ ಸಲ್ಲಿಸಿದರು.
ಪಟ್ಟಣದಲ್ಲಿರುವ ಸ್ಕೈವಾಕ್ ಮೇಲೆ ಸಾರ್ವಜನಿಕರು ನಿಂತು ಪಾರ್ಥಿವ ಶರೀರದ ವಾಹನದ ಮೇಲೆ ಹೂವು ಚೆಲ್ಲಿ ಅಂತಿಮ ದರ್ಶನ ಪಡೆದರು. ಮಾಗಡಿ ತಾಲೂಕು ಹಾಗೂ ಬಿಡದಿ ಹೋಬಳಿಯ ಗ್ರಾಮೀಣ ಭಾಗದಿಂದ ನೂರಾರು ಜನರು ಆಗಮಿಸಿದ್ದರು.
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್, ನೆಲಮಂಗಲ ಶಾಸಕ ಶ್ರೀನಿವಾಸ್, ಜಿಲ್ಲಾಧಿಕಾರಿಗಳಾದ ಯಶವಂತ್ ವಿ.ಗುರುಕಾರ್, ಎಸ್.ಪಿ.ಕಾರ್ತಿಕ್ ರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಸೇರಿ ಹಲವರು ಅಂತಿಮ ದರ್ಶನ ಪಡೆದರು.
ನನಗೆ ಹಾಗೂ ನಮ್ಮಅಣ್ಣನಿಗೆ ರಾಜಕೀಯವಾಗಿ ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಇದಲ್ಲದೆ ನಮ್ಮ ಹಾಗೂ ಅವರ ಕುಟುಂಬದ ನಡುವೆ ಸಂಬಂಧ ಸಹ ಬೆಳೆದುಕೊಂಡಿದೆ. ಅಧಿಕಾರಾವಧಿಯಲ್ಲಿ ಎಂದೂ ಪ್ರಚಾರಕ್ಕೆ ಆಸೆ ಪಟ್ಟವರಲ್ಲ. ವಿದ್ಯಾರ್ಥಿಗಳು, ಆರ್ಥಿಕ ವ್ಯವಸ್ಥೆ, ಶಿಕ್ಷಣ ಹಾಗೂ ರೈತರ ಬಗ್ಗೆ ಹಲವು ಚಿಂತನೆ ಮಾಡಿ ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದರು. ಡಿ.ಕೆ.ಸುರೇಶ್, ಮಾಜಿ ಸಂಸದ ನಮ್ಮ ಜಿಲ್ಲೆಗೆ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಈ ಹಿಂದೆ ಎರಡು ಪಥಗಳಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯನ್ನು 4 ಪಥಗಳ ಹೆದ್ದಾರಿಯಾಗಿ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಎಚ್.ಸಿ.ಬಾಲಕೃಷ್ಣ, ಶಾಸಕ