ಜಿಲ್ಲೆ

ವಾಸನೆ ಕಂಡುಹಿಡಿದರೆ ಮಾತ್ರ ಎಲ್ಲೆಡೆ ಎಂಟ್ರಿ: ಶೀಘ್ರ ಬರಲಿದೆ ಯೋಜನೆ

ಬೆಂಗಳೂರು : ನಿಮ್ಮ ವಾಸನಾ ಶಕ್ತಿ ಚೆನ್ನಾಗಿ ಇದೆಯಾ? ಎಲ್ಲದರ ಪರಿಮಳವನ್ನು ನೀವು ಗ್ರಹಿಸಬಲ್ಲಿರಾ? ಹಾಗಿದ್ದರೆ ಮಾತ್ರ ಇನ್ನು ನಿಮಗೆ ಮಾರುಕಟ್ಟೆ, ಚಿತ್ರಮಂದಿರ, ಮಾಲ್‌ ಸೇರಿದಂತೆ ಎಲ್ಲೆಡೆ ಎಂಟ್ರಿ. ಇಲ್ಲದಿದ್ದರೆ ನೀವು ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯವಶ್ಯಕ!

ಇದೇನಿದು ಎಂದು ಅಚ್ಚರಿಯಾಯಿತೆ? ಇಂಥದ್ದೊಂದು ಯೋಜನೆ ಶೀಘ್ರದಲ್ಲಿ ಕರ್ನಾಟಕದಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಅದರ ಮೊದಲ ಹಂತವಾಗಿ ಬೆಂಗಳೂರು ಮಟ್ಟಿಗೆ ಇದನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ದೆಹಲಿ, ಮುಂಬೈ ನಗರಗಳಲ್ಲಿ ಇದಾಗಲೇ ಇದು ಜಾರಿಯಾಗಿದ್ದು, ಇದೀಗ ಬೆಂಗಳೂರಿನಲ್ಲಿ ತರುವ ಸಾಧ್ಯತೆ ಇದೆ.

ಇದರ ಹೆಸರು ಸ್ಮೆಲ್‌ ಕಾರ್ಡ್‌. ಅಂದರೆ ಯಾರೇ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಹೋದ ಸಂದರ್ಭದಲ್ಲಿ ಈ ಕಾರ್ಡ್‌ ಅನ್ನು ಅವರಿಗೆ ನೀಡಲಾಗುತ್ತದೆ. ಆ ಕಾರ್ಡ್‌ನಲ್ಲಿ ಆರೇಂಜ್, ಮ್ಯಾಂಗೋ, ಲೆಮೆನ್, ವಿವಿಧ ಹಣ್ಣು-ತರಕಾರಿಗಳ ಪರಿಮಳ ಇರುತ್ತದೆ. ನೀವು ಅದನ್ನು ಸರಿಯಾಗಿ ಗುರುತಿಸಿದರೆ ಮಾತ್ರ ನಿಮಗೆ ಒಳಗಡೆ ಎಂಟ್ರಿಕೊಡಲಾಗುತ್ತದೆ.

ಅಷ್ಟಕ್ಕೂ ವಿಚಿತ್ರ ಎನಿಸುವ ಈ ಯೋಜನೆ ಹಿಂದಿದೆ ಕರೊನಾ ತಡೆಗಟ್ಟುವ ಪ್ರಯತ್ನ ಹೌದು. ಕರೊನಾ ಸೋಂಕಿತರ ಪೈಕಿ ಅತ್ಯಧಿಕ ಮಂದಿ ತಮ್ಮ ವಾಸನಾ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಅವರಿಗೆ ಯಾವುದೇ ವಾಸನೆ ಕಂಡುಹಿಡಿಯುವುದು ಕಷ್ಟ. ಅನೇಕ ಮಂದಿ ಸೋಂಕಿತರು ಮಾಲ್‌, ಚಿತ್ರಮಂದಿರ, ಹೋಟೆಲ್‌, ಬೃಹತ್‌ ಮಳಿಗೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ತಿಳಿದೋ ತಿಳಿಯದೆಯೋ ಹೋಗಿಬಿಟ್ಟರೆ ಅದು ಇತರರಿಗೂ ತುಂಬಾ ಡೇಂಜರ್‌. ಒಬ್ಬರಿಂದ ಹಲವಾರು ಮಂದಿಗೆ ಈ ಸೋಂಕು ತಗಲುವ ಸಾಧ್ಯತೆ ಇದೆ.

ಇದೇ ಕಾರಣಕ್ಕೆ, ಜನರಿಗೆ ಸೋಂಕು ತಗುಲಿದೆಯೋ ಇಲ್ಲವೋ ಎಂಬ ಪ್ರಾಥಮಿಕ ಪರೀಕ್ಷೆ ಈ ಕಾರ್ಡ್‌ ಮೂಲಕ ನಡೆಸಲಾಗುತ್ತದೆ. ಒಂದು ವೇಳೆ ಯಾರೇ ಆಗಲಿ ವಾಸನ ಗ್ರಹಿಸದೇ ಹೋದರೆ ಅಂಥವರನ್ನು ಮೊದಲು ಕರೊನಾ ಪರೀಕ್ಷೆಗೆ ಒಳಪಡಿಸಿ, ಸೋಂಕು ಪತ್ತೆ ಮಾಡಲಾಗುವುದು.

ಈ ಯೋಜನೆಯನ್ನು ಇದಾಗಲೇ ಮುಂಬೈ, ದೆಹಲಿಯಂಥ ಮಹಾನಗರಗಳಲ್ಲಿ ಶುರುಮಾಡಲಾಗಿದೆ. ಬೆಂಗಳೂರಿನಲ್ಲಿಯೂ ಇದನ್ನು ಶುರು ಮಾಡುವ ಕುರಿತು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರಿಗೆ ಪತ್ರ ಬರೆದಿದ್ದಾರೆ. ಸ್ಮೆಲ್ ಕಾರ್ಡ್ ಬಳಕೆ ಮಾಡುವ ಮೂಲಕ, ಕರೊನಾ ವೈರಸ್‌ ನಿಯಂತ್ರಣಕ್ಕೆ ಮುಂದಾಗಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಒಂದು ವೇಳೆ ಸಿಎಂ ಅನುಮತಿ ನೀಡಿದರೆ ಬೆಂಗಳೂರಿನಲ್ಲಿ ಮೊದಲು ಇದು ಜಾರಿಯ ಆಗಲಿದೆ.