ಹುಬ್ಬಳ್ಳಿ: ಮಹಿಳಾ ಈಜು ಆಸಕ್ತರನ್ನು ಆಕರ್ಷಿಸುವುದಕ್ಕಾಗಿ ಹುಬ್ಬಳ್ಳಿಯ ಈಜುಗೊಳ ಇನ್ನು ಕೆಲವೇ ತಿಂಗಳಲ್ಲಿ ‘ಸ್ಮಾರ್ಟ್’ ಆಗಿ ಬದಲಾವಣೆಗೊಳ್ಳಲಿದೆ.
ಹಲವಾರು ನ್ಯೂನತೆಗಳಿಂದಾಗಿ ಹುಬ್ಬಳ್ಳಿಯ ಈಜುಗೊಳ ಮಹಿಳೆಯರಿಂದ ದೂರವಾಗಿತ್ತು. ಪಕ್ಕದ ಐಟಿ ಪಾರ್ಕ್ನಿಂದ ಈಜುಗೊಳದ ಸಂಪೂರ್ಣ ಆವರಣ ಕಾಣಿಸುತ್ತಿತ್ತು. ಹೀಗಾಗಿ, ಮಹಿಳೆಯರು ಇಲ್ಲಿ ಈಜಲು ಹಿಂದೇಟು ಹಾಕುತ್ತಿದ್ದರು. ಪ್ರತ್ಯೇಕ ಸಮಯ ನಿಗದಿಪಡಿಸಿದ್ದರೂ, ಈಜುಗೊಳಕ್ಕೆ ಮಹಿಳೆಯರು ಕಾಲಿಡುತ್ತಿರಲಿಲ್ಲ. ಇದರಿಂದಾಗಿ, ಪುರುಷರಿಗಷ್ಟೇ ಈಜುಗೊಳ ಸೀಮಿತವಾಗಿತ್ತು.
ಅಕ್ಕಪಕ್ಕದ ರಸ್ತೆಗಳಲ್ಲಿ ನಿತ್ಯ ಸಂಚರಿಸುವ ಸುಮಾರು 1 ಲಕ್ಷ ವಾಹನಗಳಿಂದ ಹಾರಿ ಬರುತ್ತಿದ್ದ ಧೂಳು ಸಹ ಈಜುಪ್ರಿಯರಿಗೆ ಕಿರಿಕಿರಿ ಮಾಡುತ್ತಿತ್ತು. ಈ ಸಮಸ್ಯೆಗಳಿಗೀಗ ಪರಿಹಾರ ಕಂಡುಕೊಂಡಿರುವ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ಸಿಟಿ ಕಂಪನಿ, 3.48 ಕೋಟಿ ರೂ. ವೆಚ್ಚದಲ್ಲಿ ಹಲವಾರು ಸೌಲಭ್ಯಗಳನ್ನು ಅಳವಡಿಸಲು ಮುಂದಾಗಿದೆ.
ಪಕ್ಕದ ಐಟಿ ಪಾರ್ಕ್ನ 2, 3 ಹಾಗೂ 4ನೇ ಮಹಡಿಯಿಂದ ಈಜುಗೊಳದ ಆವರಣ ಕಾಣಬಾರದೆಂಬ ಉದ್ದೇಶದಿಂದ 15 ಮೀಟರ್ ಎತ್ತರದ ಸನ್ಶೆಡ್ ಸ್ಕ್ರೀನ್ (ಬಿಸಿಲಿನಿಂದ ರಕ್ಷಿಸುವ ಪರದೆ) ಅಳವಡಿಸಲಾಗುತ್ತಿದೆ. ಈಜುಗೊಳಕ್ಕೆ ಬರುವವರಿಗೆ ಇದರಿಂದ ನೆರಳೂ ಲಭಿಸಲಿದೆ. ಅಕ್ಕಪಕ್ಕದ ರಸ್ತೆಯಿಂದ ಈಜುಗೊಳದತ್ತ ಹಾರುವ ಧೂಳನ್ನೂ ಈ ಪರದೆ ನಿಯಂತ್ರಿಸಲಿದೆ. ಸುಮಾರು 21 ಅಡಿ ಆಳಕ್ಕೆ ಡೈವ್ ಮಾಡುವ ಸೌಲಭ್ಯ ಈಜುಗೊಳದಲ್ಲಿ ಇದೆ.
ಈ ಮೊದಲು ಪುರುಷರಿಗೆ ಹಾಗೂ ಮಹಿಳೆಯರಿಗೆ ತಲಾ 4 ಶೌಚಗೃಹಗಳಿದ್ದು, ಹೊಸ ಯೋಜನೆಯಡಿ ತಲಾ 10 ಶೌಚಗೃಹಗಳು, ಪ್ರತ್ಯೇಕ ಸ್ನಾನಗೃಹಗಳು ನಿರ್ವಣಗೊಳ್ಳಲಿವೆ. ಅಶೋಕಕುಮಾರ ಜಿ.ಜೆ. ಎಂಬ ಸಂಸ್ಥೆಗೆ ಈಜುಗೊಳ 2ನೇ ಹಂತದ ಕಾಮಗಾರಿಯ ಗುತ್ತಿಗೆ ನೀಡಿದ್ದು, 4 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಟಿಕೆಟ್ ಕೌಂಟರ್ ಆಧುನೀಕರಣ
ಟಿಕೆಟ್ ಕೌಂಟರ್ನಲ್ಲಿ ಹಲವಾರು ಮಾರ್ಪಾಟು ತರಲಾಗುತ್ತಿದೆ. ಈ ಮುಂಚೆ ಟಿಕೆಟ್ ನೀಡುವಾಗ ಸರಿಯಾದ ಲೆಕ್ಕ ಇರುತ್ತಿರಲಿಲ್ಲ. ಇದೀಗ ಪಿವೈಎಸ್ ಉಪಕರಣ ಅಳವಡಿಸಿ, ಈಜು ಆಸಕ್ತರಿಗೆ ಟಿಕೆಟ್ ನೀಡಲು ಯೋಜಿಸಲಾಗಿದೆ. ಇದರಿಂದ ಯಾವ ಸಮಯಕ್ಕೆ ಯಾರು ಈಜುಗೊಳದ ಒಳಗೆ ಹೋದರು, ಎಷ್ಟು ಹಣ ಸಂಗ್ರಹವಾಯಿತು ಎಂಬ ಮಾಹಿತಿಗಳು ನಿಖರವಾಗಿ ಲಭ್ಯವಾಗಲಿವೆ.
ಜೂನ್ನಿಂದ ಸ್ವಿಮ್ಮಿಂಗ್ ಶುರು
ಮಹಾನಗರ ಪಾಲಿಕೆ ಒಡೆತನದ ಈಜುಗೊಳ ಅಭಿವೃದ್ಧಿಯ ಮೊದಲ ಹಂತದ ಯೋಜನೆಯಡಿ 3.10 ಕೋಟಿ ರೂ. ವೆಚ್ಚದಲ್ಲಿ 3 ಹೊಸ ಫಿಲ್ಟರ್ ಉಪಕರಣಗಳನ್ನು ಹು-ಧಾ ಸ್ಮಾರ್ಟ್ಸಿಟಿ ಕಂಪನಿ ಅಳವಡಿಸಿದೆ. ಈಜುಗೊಳದ ನೆಲಹಾಸಿನಲ್ಲಿ ಸೋರಿಕೆ ಇದ್ದುದ್ದರಿಂದ ಸಂಪೂರ್ಣ ನೆಲಹಾಸನ್ನು ಬದಲಾಯಿಸಲಾಗಿದೆ. ಕಳೆದ ಕೆಲ ದಿನಗಳಿಂದ 2ನೇ ಹಂತದ ಯೋಜನೆಯಡಿ ಈಜುಗೊಳದ ಆವರಣದಲ್ಲಿ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಜೂನ್ಗೆ ಈಜುಗೊಳ ಈಜು ಪ್ರಿಯರಿಗೆ ಮುಕ್ತವಾಗಲಿದೆ.
ಹೊರಭಾಗದಲ್ಲೂ ಸೌಂದರ್ಯ
ಪ್ರವೇಶ ದ್ವಾರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಈಜುಗೊಳದ ಎದುರಿನ ರಸ್ತೆಯಲ್ಲಿ ಪೇವರ್ಸ್ ಅಳವಡಿಸುವ ಯೋಜನೆಯೂ ಇದ್ದು, ಇಲ್ಲಿನ ರಸ್ತೆ ಇಕ್ಕೆಲಗಳಲ್ಲಿ ಗಟಾರು ನಿರ್ವಿುಸಲಾಗುತ್ತದೆ.
300 ಜನರ ಗ್ಯಾಲರಿ
ಈಜು ಸ್ಪರ್ಧೆ ವೀಕ್ಷಿಸಲು ಬರುವವರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಈ ಮೊದಲು ಇರಲಿಲ್ಲ. ಇದೀಗ 300 ರಿಂದ 350 ಜನರು ಏಕ ಕಾಲದಲ್ಲಿ ಒಂದೆಡೆ ಕುಳಿತು ಸ್ಪರ್ಧೆ ವೀಕ್ಷಿಸುವುದಕ್ಕಾಗಿ ಗ್ಯಾಲರಿ ನಿರ್ವಿುಸಲಾಗುತ್ತಿದೆ.
ಈ ಮೊದಲು ಪುರುಷರಷ್ಟೇ ಈಜುಗೊಳಕ್ಕೆ ಬರುತ್ತಿದ್ದರು. ಹಲವಾರು ಕಾರಣಗಳಿಂದ ಮಹಿಳೆಯರು ಬರುತ್ತಿರಲಿಲ್ಲ. ಇದೀಗ ಎಲ್ಲ ನ್ಯೂನತೆಗಳನ್ನು ಸರಿಪಡಿಸಲಾಗುತ್ತಿದೆ. ಮಹಿಳಾ ಈಜು ಆಸಕ್ತರು ಯಾವುದೆ ಅಳಕು ಇಲ್ಲದೇ ಈಜುಗೊಳಕ್ಕೆ ಬರಬಹುದು. ಈಜುಗೊಳಕ್ಕೆ ಬರುವ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗುವುದು.| ಎಸ್.ಎಚ್. ನರೇಗಲ್ಲವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್ಸಿಟಿ ಕಂಪನಿ