ಆಲೂರು: ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕ್ಲಾಸ್ ಅತಿ ಅವಶ್ಯವಾಗಿದೆ ಎಂದು ಹಂಜಳಿಗೆ ಕಾಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ಸಂಸ್ಥಾಪಕ ಮಂಜುನಾಥ್ ಹಂಜಳಿಗೆ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಟೀ ಗುಡ್ಡೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿ ಮಾತನಾಡಿದರು. ಸ್ಮಾರ್ಟ್ ಕ್ಲಾಸ್‌ಗಳು ಶಿಕ್ಷಕರು ಮತ್ತು ಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೆ ಮಕ್ಕಳು ಇಲ್ಲಿ ಬಹುಬೇಗ ವಿಷಯಗಳನ್ನು ಗ್ರಹಿಸುತ್ತಾರೆ. ತರಗತಿಯ ಡಿಜಿಟಲ್ ಪರದೆಯತ್ತ ತಮ್ಮ ಮನಸ್ಸನ್ನು ಕೇಂದ್ರೀಕರಿಸುವುದರಿಂದ ಪಠ್ಯದ ವಿಷಯಗಳು ಬಹು ಬೇಗನೆ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತವೆ. ಶಿಕ್ಷಕರು ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಉದಾಹರಣೆ ಮೂಲಕ ತೋರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಅಂಕ ಪಡೆದು ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕೆಂದರು.
ನಿವೃತ್ತ ಶಿಕ್ಷಕಿ ಹಾಗೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾಂಚನಮಾಲಾ ಮಾತನಾಡಿ, ಸಮಾಜ ಸೇವಕ ಮಂಜುನಾಥ್ ಕಾಳಿಂಗಪ್ಪ ಅವರು ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ಕಾಳಜಿಗೆ ಅನಂತ ಧನ್ಯವಾದಗಳು. ಇವರು ಪ್ರತಿ ವರ್ಷವೂ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮೂರರಿಂದ ನಾಲ್ಕು ಸ್ಮಾರ್ಟ್ ಕ್ಲಾಸ್‌ಗಳನ್ನು ಪ್ರಾರಂಭಿಸುತ್ತಾ ಬಂದಿದ್ದು, ಇದುವರೆಗೂ 14 ಸ್ಮಾರ್ಟ್ ಕ್ಲಾಸ್‌ಗಳನ್ನು ಪೂರೈಸಿದ್ದಾರೆ. ಅದರಲ್ಲಿ ಆಲೂರು ತಾಲೂಕಿನಲ್ಲಿ 11 ಸ್ಮಾರ್ಟ್ ಕ್ಲಾಸ್‌ಗಳನ್ನು ತೆರೆಯಲಾಗಿದೆ, ಅಷ್ಟೇ ಅಲ್ಲದೆ ಸುಮಾರು 500ಕ್ಕೂ ಹೆಚ್ಚು ಮಕ್ಕಳಿಗೆ ಕಂಪ್ಯೂಟರ್ ಕಲಿಯುವ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಪಠ್ಯದ ಜತೆಗೆ ಪತ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಬೇಕು ಎಂದರು.
ಟಿ.ಗುಡ್ಡೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಸ್ಮಾರ್ಟ್ ಕ್ಲಾಸ್‌ನಲ್ಲಿ ಒಂದು ಲ್ಯಾಪ್‌ಟಾಪ್, ಒಂದು ಪ್ರೊಜೆಕ್ಟರ್, ಒಂದು ಪ್ರಿಂಟರ್, ಎರಡು ಕಂಪ್ಯೂಟರ್, ಸ್ಪೀಕರ್ಸ್, ಪ್ರೊಜೆಕ್ಟ್ ಸ್ಟ್ಯಾಂಡ್ ಹಾಗೂ ಶಾಲಾ ಬ್ಯಾಗ್ ಗಳನ್ನು ಮಂಜುನಾಥ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್, ಸದಸ್ಯರಾದ ಚಂದ್ರಯ್ಯ, ಸ್ವಾಮಿ, ಇಸಿಒ ದಿವಾಕರ್, ಸಿಆರ್‌ಪಿ ಮಂಜುನಾಥ್, ಮುಖ್ಯಶಿಕ್ಷಕ ಕುಮಾರ್, ಸಹಶಿಕ್ಷಕಿ ಶ್ಯಾಮಲಾ, ವೀಣಾ, ಹಳೇ ವಿದ್ಯಾರ್ಥಿ ಸಂಘದ ಶಿವಕುಮಾರ್, ಗಿರೀಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.