ಜಿಲ್ಲೆ

ಸ್ಮಾರ್ಟ್​ಸಿಟಿ ನೈಜ ಬಣ್ಣ ಅನಾವರಣ

ತುಮಕೂರು ಡೆಸ್ಕ್

ರಾತ್ರೋರಾತ್ರಿ ರಸ್ತೆ ಅಗೆದು ತರಾತುರಿಯಲ್ಲಿ ರಿಪೇರಿ, ಪ್ರಾಣಭೀತಿಯಲ್ಲೇ ಜನರ ಸಂಚಾರ

ವಿಶೇಷ ವರದಿ ತುಮಕೂರು
ಸ್ಮಾರ್ಟ್​ಸಿಟಿಯ ಅಧ್ವಾನಗಳು ಒಂದಲ್ಲ, ಎರಡಲ್ಲ. ವರ್ಷ ಕಳೆಯುವದರೊಳಗೆ ಸ್ಮಾರ್ಟ್​ಸಿಟಿ ಕಾಮಗಾರಿಗಳ ನೈಜ ಬಣ್ಣ ಒಂದೊಂದೇ ಅನಾವರಣಗೊಳ್ಳುತ್ತಿವೆ. ಬಿ.ಎಚ್​.ರಸ್ತೆಗೆ ಪರ್ಯಾಯ ರಸ್ತೆ ಎನಿಸಿರುವ ಗಂಗೋತ್ರಿ ಮುಖ್ಯರಸ್ತೆ (ಎಸ್​ಐಟಿ ಬ್ಯಾಕ್​ ಗೇಟ್​& ಎಸ್​ಎಸ್​ ಪುರಂ ಮುಖ್ಯರಸ್ತೆ&ರಾಧಾಕೃಷ್ಣ ರಸ್ತೆ )ಯನ್ನು ಸ್ಮಾರ್ಟ್​ಸಿಟಿ ಯೋಜನೆ ಉಳಿಕೆ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಏನಾದರೂ ಒಂದು ಸಮಸ್ಯೆಯಿಂದ ಈ ರಸ್ತೆಯನ್ನು ರಾತ್ರೋರಾತ್ರಿ ಅಗೆದು ರಿಪೇರಿ ಕಾಮಗಾರಿ ಕೈಗೊಳ್ಳುವುದರಿಂದ ಇಲ್ಲಿ ಸಂಚರಿಸುವರು ಪ್ರಾಣಭೀತಿಯಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ.
ಗಂಗೋತ್ರಿ ಮುಖ್ಯರಸ್ತೆ ತಿರುವಿನಲ್ಲೇ ಬಿ.ಎಚ್​.ರಸ್ತೆಯ ುಟ್​ಪಾತ್​ಗೆ ಹೊಂದಿಕೊಂಡಿರುವ ಮಳೆ ನೀರು ಹರಿಯುವ ಚರಂಡಿ ಮೇಲಿನ ಸಿಮೆಂಟ್​ ಬ್ಲಾಕ್​ ಮುರಿದುಬಿದ್ದು 6&7 ತಿಂಗಳುಗಳೇ ಕಳೆದಿದೆ. ಈ ರಸ್ತೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಲ್ಲದೆ ಸಾರ್ವಜನಿಕರು ಓಡಾಡುತ್ತಾರೆ. ಇದು ಜೀವಕ್ಕೆ ಅಪಾಯಕಾರಿ ತರುವಂತಿದ್ದರು ಪಾಲಿಕೆ ಆಗಲಿ, ಸ್ಮಾರ್ಟ್​ಸಿಟಿ ಅಧಿಕಾರಿಗಳಾಗಲಿ ದುರಸ್ತಿ ಪಡಿಸುವ ಗೋಜಿಗೆ ಹೋಗಿಲ್ಲ.
ಇನ್ನೂ ಜಯನಗರ, ಸಪ್ತಗಿರಿ, ಉಪ್ಪಾರಹಳ್ಳಿ ಭಾಗದ ಜನರು ಬಿ.ಎಚ್​.ರಸ್ತೆಗೆ ಸೇರಲು ಈ ರಸ್ತೆ ಪ್ರಮುಖ ಸಂಪರ್ಕ ರಸ್ತೆ ಎನಿಸಿದೆ. ಹಾಗಾಗಿ, ನಿತ್ಯ ಸಾವಿರಾರು ದ್ವಿಚಕ್ರ ವಾಹನಗಳು, ಶಾಲಾ&ಕಾಲೇಜು ಬಸ್​ಗಳ ಸಂಚಾರದಿಂದ ವಾಹನ ದಟ್ಟಣೆ ಇದ್ದೇ ಇರುತ್ತೆ. ಆದರೆ, ಈ ರಸ್ತೆ ಸ್ಮಾರ್ಟ್​ಸಿಟಿ ಉಳಿಕೆ ಹಣದಲ್ಲಿ ಅಭಿವೃದ್ಧಿ ಪಡಿಸಿ ವರ್ಷ ಕಳೆಯುವಷ್ಟರಲ್ಲೇ ಗುಂಡಿಮಯವಾಗಿ ಮಾರ್ಪಟ್ಟಿದೆ. ಯುಜಿಡಿ ಸಂಪರ್ಕ ರಸ್ತೆ ಮಧ್ಯದಲ್ಲಿದ್ದು, ವಾಹನಗಳ ಭಾರದಿಂದ ಕೆಲವುಕಡೆ ರಸ್ತೆ ಕುಸಿದಿದೆ.


ಅವೈಜ್ಞಾನಿಕ ರೋಡ್​ ಹಂಪ್ಸ್​: ತುಮಕೂರಿನ ಶೆಟ್ಟಿಹಳ್ಳಿ ಅಂಡರ್​ ಪಾಸ್​ ಒಳಗೆ ಹಬ್ಬದ ಸಂದರ್ಭದಲ್ಲಿ ದಿಢೀರನೆ ಅವೈಜ್ಞಾನಿಕವಾದ ಪೈಬರ್​ ಹಂಪ್ಸ್​ನ ತ್ರಿವಳಿ ಪಟ್ಟಿಗಳನ್ನು ಅಳವಡಿಸಿದ್ದು, ದ್ವಿಚಕ್ರವಾಹನ ಸವಾರರಿಗೆ ಯಮಯಾತನೆಗೆ ಕಾರಣವಾಗಿತ್ತು. ಈ ಬಗ್ಗೆ ಸಾರ್ವಜನಿಕವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಳಗಾಗುವುದರೊಳಗೆ ಎರಡು ಪಟ್ಟಿಗಳನ್ನು ತೆಗೆದು ಒಂದು ಪಟ್ಟಿಯನ್ನು ಮಾತ್ರ ಬಿಡಲಾಗಿದೆ. ಅಂಡರ್​ ಪಾಸ್​ನ ಕೇವಲ 100 ಮೀ., ಅಂತರದಲ್ಲಿ ಎರಡು ಕಡೆ 6 ರಸ್ತೆ ಉಬ್ಬುಗಳಿವೆ. ವಾಹನ ಸವಾರರಿಗೆ ಇದು ದಾಟುವುದು ಒಂದು ಸವಾಲೆನಿಸಿದೆ.

ಸಮನ್ವಯ ಕೊರತೆ: ರಸ್ತೆ ಅಭಿವೃದ್ಧಿ ಪಡಿಸಿದ ಬಳಿಕ ಸಾಕಷ್ಟು ಕಡೆ ಗ್ಯಾಸ್​ ಸಂಪರ್ಕ, ಬೆಸ್ಕಾಂ, ನೀರಿನ ಸಂಪರ್ಕಕ್ಕೆ ರಸ್ತೆ ಅಗೆಯಲಾಗಿದೆ. ಇದಲ್ಲದೆ, ವಾಲ್​ ಚೇಂಬರ್​ ನಿರ್ಮಾಣಕ್ಕೆ ಸಿಮೆಂಟ್​ ರಿಟೈನರ್​ ಬಳಸುವ ಬದಲು ಅವೈಜ್ಞಾನಿಕವಾಗಿ ರಾತ್ರೋರಾತ್ರಿ ಮಣ್ಣು ಹಾಕಿ ಮುಚ್ಚಿ ಕೈತೊಳೆದುಕೊಳ್ಳಲಾಗಿದೆ. ಚೇಂಬರ್​ ಮುಚ್ಚಿದ ಬಳಿಕ ಅದರ ಮೇಲೆ ಮತ್ತೆ ಡಾಂಬರು ಹಾಕದೆ ಬಿಟ್ಟಿರುವುದು ಇಲಾಖೆಗಳ ನಡುವೆ ಪರಸ್ವರ ಸಮನ್ವಯ ಇಲ್ಲದೇ ಇರುವುದಕ್ಕೆ ಸ್ಪಷ್ಟ ನಿದರ್ಶನವೆನಿಸಿದೆ.

ಯುಜಿಡಿಯಿಂದ ಕುಸಿದ ರಸ್ತೆ: ಯುಜಿಡಿ ಸಂಪರ್ಕ ಲೇನ್​ ರಸ್ತೆ ಮಧ್ಯೆಭಾಗದಲ್ಲಿ ಹಾದು ಹೋಗಿದೆ. ಕಳಪೆ ಗುಣಮಟ್ಟದಿಂದ ಯುಜಿಡಿ ಸಂಪರ್ಕ ಕೂಡಿದ್ದು, ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುವುದರಿಂದ ಈ ಭಾರಕ್ಕೆ ಕೆಲವು ಕಡೆ ರಸ್ತೆ ಕುಸಿದು ಹಳ್ಳಗಳು ನಿರ್ಮಾಣವಾಗಿದೆ. ಕೆಲವು ಕಡೆ ಯುಜಿಡಿ ಉಕ್ಕಿ ಹರಿದು ರಸ್ತೆಯಲ್ಲಿ ಹರಿಯುತ್ತಿದ್ದು ರಸ್ತೆ ಹಾಳಾಗಲು ಇನ್ನಷ್ಟು ಕಾರಣವಾಗಿದೆ.