ಜಿಲ್ಲೆ

ಕುದ್ರೋಳಿ ಅತ್ಯಾಧುನಿಕ ಕಸಾಯಿಖಾನೆಗೆ ತಡೆ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾದ ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿಯಲ್ಲಿ 15 ಕೋಟಿ ರೂ. ವೆಚ್ಚದ ಕಸಾಯಿಖಾನೆ ನಿರ್ಮಿಸುವ ಯೋಜನೆಗೆ ತಡೆ ನೀಡುವಂತೆ ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಮನಪಾ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕುದ್ರೋಳಿಯಲ್ಲಿ ವಧಾಗೃಹ ನಿರ್ಮಿಸಲು ಸಾರ್ವಜನಿಕರು, ವಿವಿಧ ಸಂಘಸಂಸ್ಥೆಗಳಿಂದ ಆಕ್ಷೇಪ, ಅಹವಾಲುಗಳು ಬಂದಿದೆ. ಹೊಸ ಜಾಗ ಗುರುತಿಸಲಾಗಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಚ್ಚನಾಡಿಗೆ ಹೆಚ್ಚುವರಿ 20 ಕೋಟಿ ರೂ: ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕ ಪರಿಸರದಲ್ಲಿ ತ್ಯಾಜ್ಯ ಗುಡ್ಡೆ ಕುಸಿದು ಸಂಭವಿಸಿದ ಸಮಸ್ಯೆ ಬಗೆಹರಿಸಲು ಈಗಾಗಲೇ 8 ಕೋಟಿ ರೂ. ಸರ್ಕಾರ ಬಿಡುಗಡೆಗೊಳಿಸಿದೆ. ಸಂತ್ರಸ್ತರಿಗೆ ಮೂಲಸೌಕರ್ಯ ಒದಗಿಸಲು ಹಾಗೂ ನಷ್ಟ ಭರಿಸಲು ಪಾಲಿಕೆಯಿಂದ ಹೆಚ್ಚುವರಿ 20 ಕೋಟಿ ರೂ. ಬೇಡಿಕೆ ಬಂದಿದ್ದು, ಶೀಘ್ರ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಅಮಾನತು ಎಚ್ಚರಿಕೆ: ಪಚ್ಚನಾಡಿಗೆ ಭೇಟಿ ನೀಡಿದ ಸಚಿವರು, ಅವ್ಯವಸ್ಥೆ ವೀಕ್ಷಿಸಿ ಪಾಲಿಕೆ ಇಂಜಿನಿಯರ್ ಸಹಿತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 15 ದಿನಗಳಲ್ಲಿ ಮತ್ತೆ ಭೇಟಿ ನೀಡಲಿದ್ದು, ವಸತಿ ಪ್ರದೇಶಕ್ಕೆ ಸೂಕ್ತ ರಸ್ತೆ, ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ಚರಂಡಿ ಹಾಗೂ ಅಗತ್ಯ ತಡೆಗೋಡೆ ನಿರ್ಮಿಸಬೇಕು. ಕಾಮಗಾರಿ ವಿವರವನ್ನು ನನ್ನ ವಾಟ್ಸಾಪ್‌ಗೆ ರವಾನಿಸಬೇಕು. ತಪ್ಪಿದಲ್ಲಿ ಅಮಾನತು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

ಪಂಪ್‌ವೆಲ್‌ನಲ್ಲೇ ಬಸ್‌ನಿಲ್ದಾಣ:

ನಗರದ ಪಂಪ್‌ವೆಲ್‌ನ 7 ಎಕರೆ ಜಾಗದಲ್ಲಿ 445 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸುವ ಕುರಿತು ಪಾಲಿಕೆಯಿಂದ ಬಂದಿರುವ ಪ್ರಸ್ತಾವನೆಗೆ ನಾನು ಒಪ್ಪಿಗೆ ನೀಡಿ ಸಚಿವ ಸಂಪುಟಕ್ಕೆ ಕಳುಹಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ. ಬಸ್ ನಿಲ್ದಾಣ ಸ್ಥಳದ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಸಚಿವರು ತಿಳಿಸಿದರು.