ಜಿಲ್ಲೆ

ಸ್ಮಾರ್ಟ್‌ಸಿಟಿ ಅಧಿಕಾರಿಗಳ ಕಳ್ಳಾಟ ; ಕಾಮಗಾರಿಗಳ ವಿವರ ನೀಡಲು ಮೀನಮೇಷ ; ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ಆರೋಪ

Tumakuru

ತುಮಕೂರು : ಸ್ಮಾರ್ಟ್‌ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಅಡಿಯೂ ನೀಡದೆ ಅಧಿಕಾರಿಗಳು ಕಳ್ಳಾಟವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ಹರಿಹಾಯ್ದರು.

ಸರ್ಕಾರದ ನೀತಿ ಅನ್ವಯ ಸ್ಮಾರ್ಟ್‌ಸಿಟಿ ಪಾರದರ್ಶಕತೆ ಕಾಯ್ದುಕೊಳ್ಳಲು ವೆಬ್‌ಸೈಟ್‌ನಲ್ಲಿ ಮಾಹಿತಿಗಳನ್ನು ನಮೂದಿಸಬೇಕು. ಯೋಜನೆ ಅಡಿ ಒಟ್ಟು 924 ಕೋಟಿ ರೂ., ಮೊತ್ತದ 154 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ 424 ಕೋಟಿ ರೂ., ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಗಳ ವಿವರ ಕೋರಿ ಪತ್ರ ಬರೆದಿದ್ದರೂ ಮಾಹಿತಿ ನೀಡದೆ ಮುಚ್ಚಿಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕೇಂದ್ರದ ಪಾಲಿನ ಜತೆಗೆ ರಾಜ್ಯ ಸರ್ಕಾರದ 297 ಕೋಟಿ ರೂ., ಪಾಲು ಸ್ಮಾರ್ಟ್‌ಸಿಟಿ ಯೋಜನೆಗೆ ನೀಡಲಾಗಿದೆ. ಕ್ಯಾತಸಂದ್ರ-ಗುಬ್ಬಿ ಗೇಟ್‌ವರೆಗಿನ ಹೊರವರ್ತುಲ ರಸ್ತೆ 10.5 ಕಿ.ಮೀ., ಅಭಿವೃದ್ಧಿಗೆ 98 ಕೋಟಿ ರೂ., ವೆಚ್ಚ ಮಾಡಲಾಗಿದೆ. ರಸ್ತೆ ಉದ್ಘಾಟನೆಗೂ ಮುನ್ನವೇ ಡಿವೈಡರ್‌ಗಳು ಕಿತ್ತು ಹೋಗಿವೆ. ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಬ್ರಿಡ್ಜ್, ಅಂಡರ್ ಪಾಸ್ ಇಲ್ಲದೇ ಇದ್ದರೂ ಕಿಲೋ ಮೀಟರ್‌ಗೆ 10 ಕೋಟಿ ರೂ., ವೆಚ್ಚ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಒದಗಿಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಸೂಕ್ತ ಮಾಹಿತಿ ನೀಡದೆ ಇದ್ದರೆ ಸ್ಮಾರ್ಟ್‌ಸಿಟಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಫೀಕ್ ಎಚ್ಚರಿಸಿದರು.

ಅಂದಾಜು ವೆಚ್ಚಕ್ಕಿಂತ ಮೂರು ಪಟ್ಟು ಅನುದಾನ ವೆಚ್ಚ ಮಾಡಲಾಗಿದೆ. ನಗರದ ಅಭಿವೃದ್ಧಿಗೆ ಬಳಕೆಯಾಗಬೇಕಾಗಿದ್ದ ಅನುದಾನ ಗುತ್ತಿಗೆದಾರರ ಜೇಬಿಗೆ ಇಳಿದಿದೆಯೇ? ಕಾಮಗಾರಿ ಟೆಂಡರ್ ಪ್ರಕ್ರಿಯೆ, ಹಣ ಪಾವತಿ ಸೇರಿ ಯಾವ ಮಾಹಿತಿಯನ್ನೂ ನೀಡದೆ ಗೌಪ್ಯತೆ ಕಾಪಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸ್ಮಾರ್ಟ್ ಸಿಟಿ ವೆಬ್ ಸೈಟ್‌ಗೆ 3 ಕೋಟಿ ಖರ್ಚು ಮಾಡಲಾಗಿದೆ ಎಂದರು.

175 ಕೋಟಿ ರೂ., ವೆಚ್ಚದ ಎರಡನೇ ಹಂತ ಯುಜಿಡಿ ಕಾಮಗಾರಿ ನಗರದಲ್ಲಿ ಪ್ರಾರಂಭವಾಗಿ ಏಳು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಇನ್ನೂ 24*7 ಕುಡಿಯುವ ನೀರಿನ 198 ಕೋಟಿ ರೂ., ಯೋಜನೆ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣವೇನು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಯೋಜನೆಯನ್ನು ಪೂರ್ಣಗೊಳಿಸದೇ ಹೋದರೆ ಮುಂದಿನ ವರ್ಷ ನಾನೇ ಅಧಿಕಾರಕ್ಕೆ ಬಂದು ಉದ್ಘಾಟನೆ ಮಾಡಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಜೆ.ಕುಮಾರ್, ನಯಾಜ್ ಅಹ್ಮದ್, ಮಹೇಶ್, ಪ್ರಭಾವತಿ, ಕೆಪಿಸಿಸಿ ವೈದ್ಯ ಘಟಕದ ಕೌಶರ್ ಬೇಗಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಬೂಬ್ ಪಾಷ, ಆಟೋರಾಜು, ಜಗದೀಶ್ ಮತ್ತಿತರರು ಹಾಜರಿದ್ದರು.

ಅರ್ಜಿ ಹಾಕಿರಲಿಲ್ಲ..  2008ರಲ್ಲಿ ನಾನು ಅರ್ಜಿ ಹಾಕೇ ಇರಲಿಲ್ಲ. ಒಳ್ಳೆಯ ಅಭ್ಯರ್ಥಿ, ಉತ್ತಮ ಶೈಕ್ಷಣಿಕ ಹಿನ್ನೆಲೆ ಇದ್ದ ಕಾರಣ ಎರಡೇ ದಿನದಲ್ಲಿ ನಮ್ಮ ಮಾವನ ಬದಲು ನನಗೆ ಟಿಕೆಟ್ ನೀಡಿದರು. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಅವರೇ ಹೇಳಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮಾಡಲು ಎಲ್ಲರೂ ಸಿದ್ಧರಿದ್ದೇವೆ. ಎಐಸಿಸಿ ನಿರ್ಧಾರವೇ ಅಂತಿಮ ಎಂದು ರಫೀಕ್ ಅಹ್ಮದ್ ಸ್ಪಷ್ಟಪಡಿಸಿದರು.