ಜಿಲ್ಲೆ

ಸ್ಮಶಾನದಲ್ಲೇ ಸ್ಮಾರ್ಟ್ ವೆಂಡಿಂಗ್ ಜೋನ್ ! ; ಸ್ಮಾರ್ಟ್‌ಸಿಟಿ ಯೋಜನೆ ಅಡಿ ತರಕಾರಿ ಮಾರಾಟ ವಲಯ

Tumakuru

ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಗರದ 4 ಕಡೆ ‘ಸ್ಮಾರ್ಟ್ ವೆಂಡಿಂಗ್ ಜೋನ್’ ನಿರ್ಮಿಸಲಾಗುತ್ತಿದೆ. ದೋಬಿಘಾಟ್ ಬಳಿಯ ಸ್ಮಶಾನದಲ್ಲೇ ಜೋನ್ ತಲೆಎತ್ತುತ್ತಿರುವುದು ವಿಶೇಷ.

ಅಶೋಕ ನಗರದ ದೋಬಿಘಾಟ್ ಬಳಿ ಹಳೆಯ ಸ್ಮಶಾನದ ಕಾಂಪೌಂಡ್ ತೆರವುಗೊಳಿಸಿ ತರಕಾರಿ ಮಾರಾಟಕ್ಕೆ ವೆಂಡಿಂಗ್ ಜೋನ್ ನಿರ್ಮಿಸುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶುದ್ಧ ನೀರಿನ ಘಟಕ ನಿರ್ಮಿಸಿರುವ ಭಾಗದಲ್ಲೇ 48 ಮಂದಿ ಒಂದೇ ಛಾವಣಿ ಅಡಿ ತರಕಾರಿ ವ್ಯಾಪಾರಕ್ಕೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

4.5 ಕೋಟಿ ರೂ., ಅಂದಾಜು ವೆಚ್ಚದ ಸ್ಮಾರ್ಟ್ ವೆಂಡಿಂಗ್ ಜೋನ್ ಇದಾಗಿದೆ. ಡಾ. ಗುಬ್ಬಿ ವೀರಣ್ಣ ರಂಗಮಂದಿರ ಹಿಂಭಾಗದಲ್ಲಿ ಮಾರಿಯಮ್ಮನಗರ ಸ್ಲಂ ನಿವಾಸಿಗಳಿಗೆ ನಿರ್ಮಿಸಿರುವ ವಸತಿ ಸಮುಚ್ಚಯ ಬಳಿ, ಜಯನಗರ ಬಸ್ ನಿಲ್ದಾಣ ಹಾಗೂ ಕೋತಿತೋಪು ರಸ್ತೆಯ ಕೆಇಬಿ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಫೇಸ್-1, ಫೇಸ್-2ರಲ್ಲಿ ವೆಂಡಿಂಗ್ ಜೋನ್ ನಿರ್ಮಿಸಲಾಗುತ್ತಿದೆ.

ಕೋತಿತೋಪು ಬಳಿ ಮಾತ್ರ 38 ಪೋರ್ಟಬಲ್ ಅಂಗಡಿ ರೂಪದಲ್ಲಿ ತರಕಾರಿ ಮಾರಾಟಕ್ಕೆ ಸ್ಮಾರ್ಟ್ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಉಳಿದಂತೆ 3 ಕಡೆ ವೆಂಡಿಂಗ್ ಜೋನ್‌ಗಳಲ್ಲಿ ಕಟ್ಟೆ ನಿರ್ಮಿಸಿ ಅದರ ಮೇಲೆ ಬಾಕ್ಸ್‌ಗಳನ್ನು ಆ ಜಾಗದಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಪಾಲಿಕೆಗೆ ಹಸ್ತಾಂತರ: ಪಾಲಿಕೆ ಜಾಗ ಗುರುತಿಸಿ ಸ್ಮಾರ್ಟ್‌ಸಿಟಿಗೆ ನೀಡಿದೆ. ಈ ಜಾಗದಲ್ಲಿ ವೆಂಡಿಂಗ್ ಜೋನ್ ನಿರ್ಮಿಸಿದ ಬಳಿಕ ಪಾಲಿಕೆಗೆ ಹಸ್ತಾಂತರಿಸಲಾಗುವುದು. ಅದರ ನಿರ್ವಹಣೆ, ತರಕಾರಿ ಮಾರಾಟಗಾರರಿಗೆ ಸ್ಥಳ ಹಂಚಿಕೆ ಎಲ್ಲವನ್ನೂ ಸ್ಥಳೀಯ ಕಾರ್ಪೋರೇಟರ್‌ಗಳ ಮಧ್ಯಸ್ಥಿಕೆಯಲ್ಲಿ ಅಧಿಕಾರಿಗಳು ಹಂಚಿಕೆ ಮಾಡಲಿದ್ದಾರೆ.