ಜಿಲ್ಲೆ

ಸ್ಮಾರ್ಟ್‌ಸಿಟಿ ಕಾಮಗಾರಿ ಕಳಪೆ ; ಯೋಜನೆ ತರಲು ಯಾಕಾದರೂ ಕಷ್ಟಪಟ್ಟೆವು ; ಎಸ್.ರಫೀಕ್ ಅಹ್ಮದ್ ಬೇಸರ

Tumakuru

ತುಮಕೂರು : ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಅತ್ಯಂಕ ಕಳಪೆ, ಅಸಮರ್ಪಕದಿಂದ ಕೂಡಿದ್ದು, ಅಗತ್ಯವೇ ಇಲ್ಲದ ಯೋಜನೆಗಳಿಗೆ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಗಂಭೀರ ಆರೋಪ ಮಾಡಿದರು.

2015ಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಸ್ಮಾರ್ಟ್‌ಸಿಟಿ ಯೋಜನೆ ನನ್ನ ಕನಸಿನ ಯೋಜನೆಯಾಗಿತ್ತು. ಮಹಾನಗರ ಪಾಲಿಕೆಯಾಗಿ ಬಡ್ತಿ ಹೊಂದಿದ ತುಮಕೂರನ್ನು 2ನೇ ಹಂತದಲ್ಲಿ ಸ್ಮಾರ್ಟ್‌ಸಿಟಿ ಪಟ್ಟಿಗೆ ಕೇಂದ್ರ ಸೇರಿಸಿತು. ಈ ಯೋಜನೆ ಅನುಷ್ಠಾನಗೊಂಡರೆ ಸುಂದರ ನಗರವಾಗುತ್ತೆ ಎಂಬ ಕನಸು ನುಚ್ಚುನೂರಾಗಿದೆ. ಅತ್ಯಂತ ಕಳಪೆ, ದುಂದುವೆಚ್ಚದ ಕಾಮಗಾರಿ ನೋಡಿ ನಿರಾಸೆಯಾಗಿದೆ. ಈ ಯೋಜನೆಯನ್ನು ತರಲು ಯಾಕದರೂ ಕಷ್ಟಪಟ್ಟೆವು ಅನಿಸುತ್ತಿದೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ 924 ಕೋಟಿ ರೂ., ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಕೇಂದ್ರ ಸರ್ಕಾರವು 294 ಕೋಟಿ ರೂ., 297 ಕೋಟಿ ರೂಪಾಯಿ ರಾಜ್ಯ ಸರ್ಕಾರದ್ದು ಸೇರಿ ಒಟ್ಟು 591 ಕೋಟಿ ರೂ., ಅನುದಾನ ಬಂದಿದ್ದು ಅದರಲ್ಲಿ 471 ಕೋಟಿ ರೂ., ಕಾಮಗಾರಿ ನಡೆಯುತ್ತಿದೆ. ಈ ಅನುದಾನದಲ್ಲಿ ಪಾರ್ಕ್ ಅಭಿವೃದ್ಧಿ, ಅಮಾನಿಕೆರೆಗೆ ನೀರು ಹರಿಯುವ ಪೈಪ್, ಸ್ಟೇಡಿಯಂ, ಟ್ರಾಮಾ ಸೆಂಟರ್, ಇಂಟಿಗ್ರೇಟೆಡ್ ಬಸ್‌ಸ್ಟಾೃಂಡ್ ಸೇರಿ ವಿವಿಧ ಕಾಮಗಾರಿಗಳಿಗೆ ದುಂದುವೆಚ್ಚ ಮಾಡಲಾಗಿದೆ. ನಗರದ ಹೊರವರ್ತುಲ ರಸ್ತೆ 10.5 ಕಿ.ಮೀ., ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ., ವೆಚ್ಚ ಮಾಡಿರುವುದು ಆಶ್ಚರ್ಯವೆನಿಸಿದೆ. ರಿಂಗ್ ರಸ್ತೆಗೆ ಅಷ್ಟೊಂದು ಹಣ ವೆಚ್ಚವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.

ಕ್ರೀಡಾಂಗಣಕ್ಕೆ 55 ಕೋಟಿ: ಮಹಾತ್ಮಗಾಂಧಿ ಕ್ರೀಡಾಂಗಣ ಅಭಿವೃದ್ಧಿಗೆ 55 ಕೋಟಿ ರೂ., ಅನುದಾನ ವೆಚ್ಚ ಮಾಡಲಾಗುತ್ತಿದೆ. ಅಷ್ಟು ದೊಡ್ಡ ಮೊತ್ತದಲ್ಲಿ ಬೇರೆಡೆ ಹೊಸದಾಗಿ ಜಾಗ ಖರಿದಿಸಿ ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಅನ್ನೇ ನಿರ್ಮಿಸಬಹುದಿತ್ತು ಎಂದು ರಫೀಕ್ ಹೇಳಿದರು.

3ನೇ ಅಲೆಗೆ ಸಿದ್ಧರಾಗಬೇಕು : ಕರೊನಾ 2ನೇ ಅಲೆ ಸಂದರ್ಭದಲ್ಲಿ ಸರ್ಕಾರ ಸಿದ್ಧತೆ ಮಾಡಿಕೊಂಡಿರಲ್ಲಿಲ್ಲ. ಹಾಗಾಗಿ, ಸಾವು ನೋವು ಹೆಚ್ಚಿಗೆ ಸಂಭವಿಸಿತು. ಈಗ 3ನೇ ಅಲೆ ಬರುತ್ತದೆ ಎಂಬ ತಜ್ಞರ ಅಭಿಪ್ರಾಯ ಹಿನ್ನೆಲೆಯಲ್ಲಿ ಈಗಲಾದರೂ ಸರ್ಕಾರ, ಜಿಲ್ಲಾಡಳಿತವು ಸೋಂಕು ಎದುರಿಸಲು ಸನ್ನದ್ಧವಾಗಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಪಾಲಿಕೆ ಮಾಜಿ ಮೇಯರ್ ಫರಿದಾಬೇಗಂ, ಪಾಲಿಕೆ ವಿಪಕ್ಷ ನಾಯಕ ಜೆ.ಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್ ಅಹ್ಮದ್, ಕಾರ್ಪೋರೇಟರ್ ಎನ್.ಮಹೇಶ್ ಇದ್ದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ : ಸ್ಮಾರ್ಟ್‌ಸಿಟಿ, ಮುಖ್ಯಮಂತ್ರಿಗಳ ವಿಶೇಷ ಅನುದಾನ, ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಸೇರಿ ಪ್ರಮುಖ 3 ಯೋಜನೆಗಳ ಶೀರ್ಷಿಕೆಯಡಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಕಾಂಗ್ರೆಸ್ ಕಾರ್ಪೋರೇಟರ್‌ಗಳು ಪ್ರತಿನಿಧಿಸುವ ವಾರ್ಡ್‌ಗಳಿಗೆ ನಯಾಪೈಸೆ ನೀಡಿಲ್ಲ. ಈ ರೀತಿ ತಾರತಮ್ಯ ಸರಿಯಲ್ಲ. ನನ್ನ ಅವಧಿಯಲ್ಲಿ ಎಂದೂ ಈ ರೀತಿ ತಾರತಮ್ಮ ಮಾಡಿಲ್ಲ ಎಂದು ರಫೀಕ್ ಅಹ್ಮದ್ ಆಕ್ರೋಶ ಹೊರಹಾಕಿದರು.

ಇಂದಿರಾಗಾಂಧಿ ಉಳುವವನೇ ಭೂಮಿಯ ಒಡೆಯ ಎಂದರು. ಪ್ರಧಾನಿ ನರೇಂದ್ರ ಮೋದಿ ಉಳ್ಳವನೇ ಒಡೆಯ ಎನ್ನುತ್ತಿದ್ದಾರೆ. ಭ್ರಷ್ಟಾಚಾರದ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು. ಆರ್.ರಾಮಕೃಷ್ಣ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್