ಜಿಲ್ಲೆ

ಕಾರ್ಮಿಕ ಕುಟುಂಬ ಸದಸ್ಯರಿಗೆ ಭದ್ರತೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಅಸಂಘಟಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಕೊಡಗು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗಾಗಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಮಂಡಳಿಯ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಮೂರು ಪ್ರಮುಖ ಮಸೂದೆಗಳನ್ನು ಪರಿಚಯಿಸಲಾಗಿದೆ. ಆನ್‌ಲೈನ್ ಆರ್ಡರ್‌ಗಳನ್ನು ಸಮಯದ ಪರಿವೇ ಇಲ್ಲದೇ ಮನೆ ಮನೆಗೆ ತಲುಪಿಸುವ ಗಿಗ್ ಕಾರ್ಮಿಕರಿಗಾಗಿ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ, ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಅಧಿನಿಯಮ-25 ಮೂಲಕ ಅಂಥ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಭದ್ರತೆ ಕೊಡಲಾಗಿದೆ.

ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿದ ಕಾರ್ಮಿಕರ (ಕಲ್ಯಾಣ) ಸುಂಕ ಅಧಿನಿಯಮ-2024ರ ಮೂಲಕ ಸಿನಿಮಾಕ್ಕೆ ಸಂಬAಧಿಸಿದ ವಿವಿಧ ವಿಭಾಗಗಳಲ್ಲಿ ದುಡಿಯುವವರು, ಪೌರಾಣಿಕ ನಾಟಕ ಕಲಾವಿದರು ಸೇರಿದಂತೆ ಅಭದ್ರತೆ ಎದುರಿಸುತ್ತಿದ್ದ ಕಲಾವಿದರು ಮತ್ತು ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬAಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಮೂಲಕ ಸಾರಿಗೆಗೆ ಸಂಬAಧಿಸಿದ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುವವರು ಮತ್ತು ಅವರ ಅವಲಂಬಿತರಿಗೆ ಅನುಕೂಲ ಕಲ್ಪಿಸಲಾಗಿದೆ. ಸರ್ಕಾರ ಯಾವಾಗಲೂ ಅಸಂಘಟಿತ ಕಾರ್ಮಿಕರ ನೆರವಿಗಾಗಿ ಇದ್ದು, ಮೊದಲು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಆಶಾದೀಪ ಯೋಜನೆ ಅಡಿ ನೋಂದಣಿ ಮಾಡಿಕೊಂಡ ಸಂಸ್ಥೆಗಳು ಎಸ್‌ಸಿ, ಎಸ್‌ಟಿ ನೌಕರರಿಗೆ ಕೆಲಸ ಕೊಟ್ಟರೆ 2 ವರ್ಷಗಳ ಕಾಲ ಅವರ ಅರ್ಧ ಸಂಬಳ ಸರ್ಕಾರವೇ ಕೊಡುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಈ ಮೊದಲು 26ರಷ್ಟು ಇದ್ದ ಅಸಂಘಟಿತ ಕಾರ್ಮಿಕರ ಗುಂಪನ್ನು ಈಗ 101ಕ್ಕೆ ಏರಿಸಲಾಗಿದೆ.

ಸರ್ಕಾರದ ಆಶಾದೀಪಾ ಯೋಜನೆಯಿಂದ ಪರಿಶಿಷ್ಟ ಜಾತಿ, ಪಂಗಡದ ಶೋಷಿತರಿಗೆ ಅನುಕೂಲ ಆಗುತ್ತಿದೆ. ಇದು ಈ ವರ್ಗದ ಬಗೆಗಿನ ಸರ್ಕಾರದ ಕಾಳಜಿ ತೋರಿಸುತ್ತದೆ. ನಮ್ಮ ಸರ್ಕಾರದ ಮೂಲಕ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕೊಡಲಾಗುತ್ತಿದೆ. ದೇಶದ ಯಾವ ಭಾಗದಲ್ಲೂ ಕಾರ್ಮಿಕರಿಗೆ ಭದ್ರತೆಯ ಇಂಥ ಕಾರ್ಯಕ್ರಮ ರೂಪಿಸಿಲ್ಲ. ಕಾರ್ಮಿಕರ ಆರೋಗ್ಯಕ್ಕೆ ರಕ್ಷಣೆ, ಭದ್ರತೆ ನೀಡುವ ಯೋಜನೆ ಮೂಲಕ ಸಮಾಜದ ಮುಖ್ಯವಾಹಿನಿಯಿಂದ ದೂರ ಇಟ್ಟವರಿಗೂ ಸಮಾನತೆಯ ಅವಕಾಶ ಕೊಡಲಾಗಿದೆ. ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನವನ್ನು ಅಸಂಘಟಿತ ವಲಯದ ಕಾರ್ಮಿಕರು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್ ಮಾತನಾಡಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಚಿಂತನೆಯ ದಾರಿಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಇಲ್ಲಿ ತನಕ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ರೂ. ವಿನಿಯೋಗಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ವಿಶ್ವ ಸಂಸ್ಥೆಯಿAದಲೂ ಶ್ಲಾಘನೆ ವ್ಯಕ್ತವಾಗಿದೆ. ಮಹಿಳೆಯರಿಗೆ ಶಕ್ತಿ ನೀಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದ್ದು, ಈ ಯೋಜನೆಗಳಿಂದ ಮಾತ್ರವಲ್ಲದೆ ವಿವಿಧ ಕೆಲಸಗಳ ಮೂಲಕವೂ ಸರ್ಕಾರ ಹೆಸರು ಮಾಡಿದೆ. ಕಾರ್ಮಿಕ ಕಾನೂನು ಅನುಷ್ಠಾನ ಮತ್ತು ಕಾರ್ಮಿಕ ಕಲ್ಯಾಣದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶ ಕಟ್ಟುವಲ್ಲಿ ಪ್ರಮುಖ ಸ್ಥಾನದಲ್ಲಿರುವ ಕಾರ್ಮಿಕರಿಗಾಗಿಯೂ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಜಿಲ್ಲೆಯ ಕಾರ್ಮಿಕರಿಗೆ ವಸತಿ ಯೋಜನೆ ತಲುಪುತ್ತಿಲ್ಲ. ವಸತಿ ಕಲ್ಪಿಸಲು ಇಲ್ಲಿ ಜಾಗದ ಕೊರತೆ ಸೇರಿ ಹಲವು ಸಮಸ್ಯೆಗಳು ಇವೆ. ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು 60 ವರ್ಷ ನಂತರ ಬೀದಿಗೆ ಬರುತ್ತಾರೆ. ಇವರಿಗೆ ನೆಲೆ ಕಲ್ಪಿಸಬೇಕು. ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸದ ನಿಟ್ಟಿನಲ್ಲಿ ಜಿಲ್ಲೆಗೆ ವಸತಿ ಶಾಲೆ ಕೊಟ್ಟಿರುವುದು ಶ್ಲಾಘನೀಯ. ಇದರಿಂದ ಕಾರ್ಮಿಕರ ಮಕ್ಕಳಿಗೆ ಅನುಕೂಲ ಆಗಲಿದೆ. ಯೋಜನೆಗಳ ಬಗ್ಗೆ ಕಾರ್ಮಿಕ ಇಲಾಖೆ ಸಿಬ್ಬಂದಿ ಕಾರ್ಮಿಕರಿಗೆ ಸರಿಯಾಗಿ ಮಾಹಿತಿ ಕೊಡಬೇಕು. ಸವಲತ್ತು ಸಿಕ್ಕಿದವರಿಗೇ ಸಿಗುತ್ತಿದೆ ಎನ್ನುವ ಆರೋಪ ಇದೆ. ಇದು ಮತ್ತೆ ಕೇಳಿಬರಬಾರದು ಎಂದು ಹೇಳಿದರು.

ಆರಂಭದಲ್ಲಿ ಮಾತನಾಡಿದ ಜಂಟಿ ಕಾರ್ಮಿಕ ಆಯುಕ್ತ ಎಸ್.ವಿ. ರವಿಕುಮಾರ್ ತಮ್ಮ ಇಲಾಖೆ ಮೂಲಕ ಕಾರ್ಮಿಕರಿಗೆ ಕಾನೂನಿನ ರಕ್ಷಣೆ, ಸಾಮಾಜಿಕ ಭದ್ರತಾ ಯೋಜನೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರಲ್ಲದೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗಾಗಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕಾರ್ಮಿಕ ಆಯುಕ್ತ ಹೆಚ್.ಎನ್. ಗೋಪಾಲಕೃಷ್ಣ, ಸಹಾಯಕ ಕಾರ್ಮಿಕ ಆಯುಕ್ತ ಹೆಚ್.ಎಲ್. ಗುರುಪ್ರಸಾದ್, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯ ಕೆ.ಪಿ. ಜಾನಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ಎಸ್.ಪಿ. ಕೆ. ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ನಾಜಿಯ ಸುಲ್ತಾನ್, ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಟಿ. ಕಾವೇರಿ ಇದ್ದರು.