ಜಿಲ್ಲೆ

ಸಣ್ಣ ಒತ್ತುವರಿದಾರರ ತೆರವು ಮಾಡಲ್ಲ

ಜಿ.ಹೆಚ್. ಧನ್ಯಕುಮಾರ್

ಕೊಪ್ಪ: ಅರಣ್ಯ ಭೂಮಿಯಲ್ಲಿ ಮೂರು ಎಕರೆ ಒಳಗೆ ಭೂಮಿ ಒತ್ತುವರಿ ಮಾಡಿಕೊಂಡು ಜೀವನಕ್ಕಾಗಿ ಕೃಷಿ ಚಟುವಟಿಕೆ ನಡೆಸುತ್ತಿರುವವರ ಒತ್ತುವರಿ ಖುಲ್ಲಾಪಡಿಸುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ಬಾಳೆಮನೆ ನಟರಾಜ್ ಹೇಳಿದರು.
ಒತ್ತುವರಿ ವಿಚಾರವಾಗಿ ಮಲೆನಾಡ ರೈತರನ್ನು ಕೆಲವು ಸಂಘಟನೆಗಳು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಕಾಂಗ್ರೆಸ್ ಮೇಲೆ ಗೂಬೆ ಕುರಿಸುತ್ತಿದೆ ಹೊರತು, ವಾಸ್ತವ ಸತ್ಯವನ್ನು ರೈತರಮುಂದಿಡುತ್ತಿಲ್ಲ. ಈ ವಿಚಾರವಾಗಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಒತ್ತುವರಿ ಬಗ್ಗೆ ಮಲೆನಾಡಿನ ರೈತರಿಗೆ ತಪ್ಪು ಮಾಹಿತಿ ರವಾನಿಸಲಾಗುತ್ತಿದೆ. ಮೂರು ಎಕರೆ ಒಳಗೆ ಇರುವ ಒತ್ತುವರಿದಾರರ ಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2015ರ ಈಚೇಗಿನ ಹೊಸ ಒತ್ತುವರಿಗಳನ್ನು ಹಾಗೂ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಪ್ರಕರಣಗಳನ್ನು ಮಾತ್ರ ತೆರವು ಮಾಡಲಾಗುತ್ತಿದೆ. ಅನಾವಶ್ಯಕವಾಗಿ ಯಾವುದೇ ತೆರವು ಕಾರ್ಯ ಶೃಂಗೇರಿ ಕ್ಷೇತ್ರದಲ್ಲಿ ನಡೆದಿಲ್ಲ, ರಾಜ್ಯ ಸರ್ಕಾರ ಪಾರಂಪರಿಕ ಅರಣ್ಯ ಹಕ್ಕುಕಾಯ್ದೆಯನ್ನು 75 ವರ್ಷದಿಂದ 25ವರ್ಷಕ್ಕೆ ಇಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯಸರ್ಕಾರದ ಈ ನಡೆ ಅದಿವಾಸಿಗಳಿಗೆ, ಬುಡಕಟ್ಟು ಜನರಿಗೆ ಅನುಕುಲವಾಗಲಿದೆ. ಕಂದಾಯ ಭೂಮಿಯಲ್ಲಿಯೂ ಸಹ ಜನರು ಕೃಷಿ ಚಟುವಟಿಕೆ ನಡೆಸಲು ಒತ್ತುವರಿ ಮಾಡಿಕೊಂಡಿದ್ದರೇ ಸಮಸ್ಯೆಯಿಲ್ಲ. ಒತ್ತುವರಿ ಭೂಮಿಯಲ್ಲಿ ಬೇರೆ ಚಟುವಟಿಕೆ ನಡೆಸಿದರೇ ಮಾತ್ರ ತೆರವು ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಿಸಾನ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ರೈತ ಒತ್ತುವರಿ ಭೂಮಿಯ ತೆರವುಗೊಳಿಸುವ ಬಗ್ಗೆ ಸರ್ಕಾರ ಕಾಯ್ದೆ ರೂಪಿಸಿಲ್ಲ. ನ್ಯಾಯಾಲಯದ ಆದೇಶವನ್ನು ಮಾತ್ರ ಪಾಲನೆ ಮಾಡಲಾಗುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ರೈತ ವಿರೋಧಿಯಾಗಿ ನಡೆದುಕೊಂಡಿಲ್ಲ ಎಂದರು.
2015ರಲ್ಲಿ ಎಸ್.ಆರ್ ಹಿರೇಮಠ್ ರವರು ಜಿಲ್ಲಾಧಿಕಾರಿಗಳ ಬಳಿ ಅಕ್ರಮ-ಸಕ್ರಮದಲ್ಲಿ ರೈತರು ರಾಜ್ಯದಲ್ಲಿ ಸಲ್ಲಿಸಿರುವ ಅರ್ಜಿಗಳ ಅಂಕಿ ಅಂಶಗಳನ್ನು ತೆಗೆದುಕೊಂಡು ಅಂದಾಜಿನಲ್ಲಿ ಇಷ್ಟು ಭೂಮಿ ಒತ್ತುವರಿಯಾಗಿದೆ ಎಂದು ನ್ಯಾಯಾಲಯದಲ್ಲಿ ಪಿಎಎಲ್ ಹಾಕಿದ್ದರು ಹೊರತು, ಬೇರೆ ಯಾವ ಒತ್ತುವರಿ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಈ ವೇಳೆ ಸರ್ಕಾರ ಸಹ ಮೂರು ಎಕರೆ ಒಳಗಿನ ಒತ್ತುವರಿ ಭೂಮಿ ತೆರವು ಮಾಡಲ್ಲ ಎಂದು ಆಫಿಡೇವಿಟ್ ಸಹ ಸಲ್ಲಿಸಿ ರೈತರ ಪರವಾಗಿ ನಿಂತುಕೊಂಡಿದೆ ಎಂದರು.
ಶಾಸಕ ರಾಜೇಗೌಡರ ನೇತೃತ್ವದಲ್ಲಿ ಮುಖ್ಯಮಂತ್ರಿ, ಅರಣ್ಯ ಸಚಿವರ ಬಳಿ ನಿಯೋಗ ತೆರಳಲಾಗುತ್ತದೆ. ನಂತರ ಒತ್ತುವರಿ ಬಗ್ಗೆ ಉದ್ಬವಿಸಿರುವ ಗೊಂದಲ, ಅಪ ಪ್ರಚಾರಗಳಿಗೆ ಉತ್ತರ ನೀಡಲಾಗುತ್ತದೆ ಎಂದು ತಿಳಿಸಿದರು.