ತುಮಕೂರು : ತರಹೇವಾರಿ ಸಸ್ಯ ಹಾಗೂ ಪ್ರಾಣಿ ವೈವಿಧ್ಯಕ್ಕೆ ಹೆಸರಾಗಿರುವ ದೇವರಾಯನದುರ್ಗ ಅರಣ್ಯ ಪ್ರದೇಶ ಇಂಥದ್ದೇ ಹೊಸ ಪ್ರಭೇದದ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಾಗಿದೆ. ವಿಶ್ವದಲ್ಲಿಯೇ ಅಪರೂಪ ಎನಿಸಿರುವ ಅತೀ ಚಿಕ್ಕ ಬೆಕ್ಕು ‘ರಸ್ಟಿ ಸ್ಪಾಟೆಡ್ ಕ್ಯಾಟ್’ ಇದೇ ಮೊದಲ ಬಾರಿಗೆ ಕ್ಯಾಮರಾಗೆ ಸೆರೆಯಾಗಿದೆ.
ಭಾರತ ಹಾಗೂ ಶ್ರೀಲಂಕಾದ ಕೆಲವೇ ಅರಣ್ಯ ಪ್ರದೇಶದಲ್ಲಿ ಕಂಡುಬಂದಿದ್ದ ಈ ಬೆಕ್ಕನ್ನು ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ವಿರೋರ್ ಆರ್ಗನೈಸೇಷನ್ ಸಹ ಸಂಸ್ಥಾಪಕ, ವನ್ಯಜೀವಿ ಸಂರಕ್ಷಕ ವಿಪಿನ್‌ರಾಯ್ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪ್ರಾಣಿ ಸಂಕುಲದ ಅಧ್ಯಯನಕ್ಕೆ ದಾರಿ ಮಾಡಿದ್ದಾರೆ. ವಿಪಿನ್ ರಾಯ್ ಇತ್ತೀಚೆಗೆ ದೇವರಾಯನದುರ್ಗ ಮಾರ್ಗದಲ್ಲಿ ಸಂಚರಿಸುವಾಗ ರಸ್ಟಿ ಸ್ಪಾಟೆಡ್ ಕ್ಯಾಟ್ ಕಣ್ಣಿಗೆ ಬಿದ್ದಿದ್ದು, ಪೊದೆಯಲ್ಲಿದ್ದ ಬೆಕ್ಕಿನ ೆಟೋ ಸೆರೆಯಾಗಿದೆ.
ದೇಶದಲ್ಲಿಯೇ ಅಪರೂಪ ಎನಿಸಿರುವ ‘ರಸ್ಟಿ ಸ್ಪಾಟೆಡ್ ಕ್ಯಾಟ್’ ಕೇವಲ 35ರಿಂದ 48 ಸೆಂ.ಮೀ. ಉದ್ದವಾಗಿರುತ್ತದೆ. ತೂಕ 900ಗ್ರಾಂ ನಿಂದ 1.6 ಕೆ.ಜಿ. ಮಾತ್ರ. ಇವುಗಳ ಕಣ್ಣು ಹೆಚ್ಚು ಶಕ್ತಿಯುತವಾಗಿದ್ದು ಮನುಷ್ಯನ ಕಣ್ಣಿನ ಸಾಮರ್ಥ್ಯಕ್ಕಿಂತ 6 ಪಟ್ಟು ಜಾಸ್ತಿಯಿದೆ.
ಕಾಡು ಬೆಕ್ಕು ಕತ್ತಲೆಯಲ್ಲಿ ಸಕ್ರಿಯವಾಗಿರಲಿದ್ದು ಶುಷ್ಕ ವಾತಾವರಣ, ಕುರುಚಲು ಹುಲ್ಲುಗಾವಲು ಮತ್ತು ಕಲ್ಲಿನ ಪ್ರದೇಶದಲ್ಲಿ, ಮರ, ಮರದ ದಿಮ್ಮಿಗಳಲ್ಲಿ, ಪೊಟರೆಗಳಲ್ಲಿ ವಾಸವಿರುತ್ತದೆ. ಚಿಕ್ಕದಾಗಿದ್ದರೂ ಮರವೇರಿ ಕುಳಿತುಕೊಳ್ಳುವ ಸಾಮರ್ಥ್ಯ ಇತರ ಪ್ರಾಣಿಗಳಿಂದ ರಕ್ಷಣೆಗೆ ಸಾಧ್ಯವಾಗಿಸಿದೆ.
ಭಾರತದಲ್ಲಿ ವಸಂತಕಾಲದಲ್ಲಿ 65ರಿಂದ 67 ದಿನಗಳ ಗರ್ಭಾವಸ್ಥೆಯಲ್ಲಿ, 1 ಅಥವಾ 2 ಮರಿಗಳಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದಿದ ಮರಿಗಳು ಕುರುಡಾಗಿ ಜನಿಸಿದರೂ ನಂತರ ದೃಷ್ಟಿ ಪಡೆಯಲಿವೆ.
ಅಳಿವಿನಂಚಿನಲ್ಲಿರುವ ಅಪರೂಪ ಎನಿಸಿರುವ ವಿಶ್ವದ ಅತೀ ಚಿಕ್ಕ ಬೆಕ್ಕು ರಸ್ಟಿ ಸ್ಪಾಟೆಡ್ ನಮ್ಮಲ್ಲಿ ಕಾಣಿಸಿರುವುದು ವಿಶೇಷ ಎನಿಸಿದೆ. ಪಕ್ಷಿ, ಹಲ್ಲಿ, ಕಪ್ಪೆ, ಹಾವು, ಕೀಟಗಳನ್ನು ತಿಂದು ಜೀವಿಸುತ್ತವೆ. ಹಳ್ಳಿಗಳಲ್ಲಿ ಅಪರೂಪಕ್ಕೆ ಕಾಣಿಸಿದಾಗ ಇದೇ ಬೆಕ್ಕನ್ನು ಚಿರತೆ ಮರಿ ಎಂದು ಭಾವಿಸಿದ್ದ್ದೂ ಇದೆ. ಇದು ಬೆಕ್ಕಿನ ಜಾತಿಗಳಲ್ಲಿ ಅತಿ ಚುರುಕಾಗಿರುವ ಬೆಕ್ಕು. ಇದು ಅಳಿವಿನಂಚಿನಲ್ಲಿದ್ದು, ಸಂರಕ್ಷಿಸುವ ಅಗತ್ಯವಿದೆ. ವಿಪಿನ್ ರಾಯ್, ವನ್ಯಜೀವಿ ಸಂರಕ್ಷಕ