ಜಿಲ್ಲೆ

ಮದ್ಯಕ್ಕಾಗಿ ಚಪ್ಪಲಿ ಇಟ್ಟು ಕಾದರು

ರಾಮನಗರ: ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಎಲ್ಲ ಎಂಎಸ್ಐಎಲ್​ ಮತ್ತು ವೈನ್​ಶಾಪ್​ ಮಳಿಗೆಗಳ ಮುಂದೆ ಮದ್ಯಕ್ಕಾಗಿ ಗ್ರಾಹಕರು ಕ್ಯೂ ನಿಂತಿದ್ದರು. ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯ ನೇತ್ರ ವೈನ್ಸ್ ಸ್ಟೋರ್​ ಬಳಿ ಸಾಮಾಜಿಕ ಅಂತರಕ್ಕೆಂದು ಹಾಕಿರುವ ವೃತ್ತಗಳಲ್ಲಿ ಗ್ರಾಹಕರು ತಮ್ಮ ಚಪ್ಪಲಿಗಳನ್ನು ಇಟ್ಟು ಜಾಗ ಕಾಯ್ದಿರಿಸಿಕೊಂಡಿದ್ದರು. ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಅವರವರ ಚಪ್ಪಲಿ ಬಳಿ ಸಾಲಾಗಿ ನಿಂತು "ಎಣ್ಣೆ' ಖರೀದಿಸಿದರು.

ಇನ್ನು ಚನ್ನಪಟ್ಟಣದ ಬಿವಿ ಹಳ್ಳಿಯ ಎಂಎಸ್ಐಎಲ್​ ಮಳಿಗೆಗೆ ಬಹುತೇಕ ಎಲ್ಲ ಗ್ರಾಹಕರೂ ಬ್ಯಾಗ್​ ಹಿಡಿದುಕೊಂಡೇ ಬಂದಿದ್ದರು. ತರಕಾರಿಯನ್ನು ಬ್ಯಾಗ್​ನಲ್ಲಿ ತುಂಬಿಕೊಂಡು ಹೋಗುವಂತೆ ಮದ್ಯ ಖರೀದಿ ಮಾಡಿ ಕೊಂಡೊಯ್ಯುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಹಲವೆಡೆ ಮದ್ಯಪಾನಪ್ರಿಯರು ಸಾಮಾಜಿಕ ಅಂತರ ಮರೆತು ಮದ್ಯ ಖರೀದಿಸುವಲ್ಲಿ ಮಗ್ನರಾಗಿದ್ದರು.

ಜಿಲ್ಲೆಯಲ್ಲಿರುವ ಒಟ್ಟು 88 ವೈನ್​ಶಾಪ್​ಗಳು ಮತ್ತು ಎಂಎಸ್ಐಎಲ್​ ಔಟ್​ ಲೆಟ್​ಗಳ ಮೂಲಕ ಮದ್ಯ ಮಾರಾಟಕ್ಕೆ ಇಂದಿನಿಂದ ಅವಕಾಶ ನೀಡಲಾಗಿದೆ. ವೈನ್​ಶಾಪ್​ಗಳ ಬಳಿ ಅಂತರ ಕಾಪಾಡಲು ಸಾರ್ವೆ ಮರಗಳ ಮೂಲಕ ಬ್ಯಾರಿಕೇಡ್​ ಹಾಕಲಾಗಿದೆಯಾದರೂ ಒಬ್ಬರಿಗೆ ಮತ್ತೊಬ್ಬರು ಅಂಟಿಕೊಂಡೇ ನಿಂತು ಮದ್ಯ ಖರೀದಿಗೆ ಮುಗಿಬಿದ್ದದ್ದು ಮಾತ್ರ ಆತಂಕಕಾರಿ.