ಸಕಲೇಶಪುರ: ತಾಲೂಕಿನಲ್ಲಿ ಶನಿವಾರ ಮಳೆ ಪ್ರಮಾಣ ತುಸು ಕಡಿಮೆಯಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಗಿಂತ ಗಾಳಿಯ ಆರ್ಭಟ ಬಿರುಸಾಗಿತ್ತು.
ಆಷಾಢದಲ್ಲಿ ಕಡಿಮೆ ಪ್ರಮಾಣದಲ್ಲಿ ಬಿದ್ದ ಮಳೆ ಶ್ರಾವಣ ಮಾಸದಲ್ಲಿ ಭರ್ಜರಿಯಾಗಿ ಆರಂಭವಾಗಿತ್ತು. ಶುಕ್ರವಾರ ತಾಲೂಕಿನಲ್ಲಿ ಭರ್ಜರಿಯಾಗಿ ಮಳೆ ಸುರಿದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಶನಿವಾರ ತಾಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರು. ಇದರಿಂದ ಮಕ್ಕಳು ಶನಿವಾರ ಮನೆಗಳಲ್ಲೇ ಉಳಿದರು.
ತಾಲೂಕಿನ ಹೆತ್ತೂರು, ಹಾನುಬಾಳ್, ಯಸಳೂರು ಹೋಬಳಿಗಳಲ್ಲಿ ಮಳೆ ಜತೆಗೆ ಗಾಳಿ ಆರ್ಭಟ ಜೋರಾಗಿತ್ತು. ಕಸಬಾ, ಬೆಳಗೋಡು ಹೋಬಳಿಯಲ್ಲಿ ಮಳೆ, ಗಾಳಿ ಆರ್ಭಟ ತುಸು ಕಡಿಮೆ ಇತ್ತು. ಭಾರಿ ಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿ ಕತ್ತಲಿನಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆತ್ತೂರು ಮತ್ತು ಯಸಳೂರು ಹೋಬಳಿಯ ಕಾಗಿನೆರೆ, ಕೊಂತನಮನೆ, ಅತ್ತಿಹಳ್ಳಿ, ವನಗೂರು ಕೂಡ ರಸ್ತೆ, ಮಾಗೇರಿ, ಬಾಣಗೇರಿ, ಉಚ್ಚಂಗಿ ಗೊದ್ದು ಸುತ್ತಮುತ್ತಲಿನ ನೂರಾರು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲದೆ ಸಂಕಷ್ಟದಲ್ಲಿದ್ದು ಇನ್ನೂ ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಭೇೀಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರಿಗೆ ಮಳೆ ಹಬ್ಬ:
ಶನಿವಾರ ಮತ್ತು ಭಾನುವಾರ ಸಕಲೇಶಪುರ ಭಾಗಕ್ಕೆ ಮಳೆಯ ಮೋಜು ಸವಿಯಲು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು ಕಂಡು ಬಂದಿತು.
ಭತ್ತದ ಕೃಷಿಗೆ ಹಿನ್ನಡೆ:
ಮಲೆನಾಡು ಭಾಗದಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ರೈತರು ಭತ್ತದ ನಾಟಿಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದಾರೆ. ಕಾಫಿ ತೋಟಗಳಲೂ ಸರಾಗ ಕೆಲಸಕ್ಕೆ ಅಡಚಣೆಯುಂಟಾಗಿದೆ.
ಮನೆಗಳಿಗೆ ಹಾನಿ:
ಭಾರಿ ಮಳೆಯಿಂದಾಗಿ ಮನೆಗಳಿಗೆ ಶೀತ ಉಂಟಾಗಿ ಹಲವಾರು ಮನೆಗಳ ಗೋಡೆಗಳು ಕುಸಿದಿವೆ. ತಾಲೂಕಿನ ಕ್ಯಾಮನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಶೋಭಾ ಅವರ ಮನೆ ಮಳೆಯಿಂದ ಕುಸಿದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಪರಿಶೀಲನೆ ನಡೆಸಿದರು.
ಕುಸಿದ ಮೋರಿ: ತಾಲೂಕಿನ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿಯ ನೂದರಹಳ್ಳಿಯ ರಾಮೇಗೌಡರ ಮನೆ ಹತ್ತಿರ ರೋಡಿನ ಮೋರಿ ಕುಸಿದಿದ್ದು ಕ್ಯಾನಹಳ್ಳಿಯಿಂದ ಬೊಮ್ಮನಕೆರೆ ಮಾರ್ಗವಾಗಿ ಬರುವ ಭಾರಿ ವಾಹನಗಳಿಗೆ ಸಮಸ್ಯೆ ಆಗಿದೆ. ಈ ರಸ್ತೆಯಲ್ಲಿ ನಿತ್ಯ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಮಧ್ಯೆ ನೀರಿನ ಹರಿವಿಗಾಗಿ 3 ಮೋರಿ ಅಳವಡಿಸಿದ್ದು ಜೋರು ಮಳೆಗೆ ಒಂದು ಮೋರಿ ಕುಸಿದು ಇನ್ನೂ ಎರಡು ಮೋರಿ ಕುಸಿಯುವ ಹಂತದಲ್ಲಿದೆ. ಇದರಿಂದ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸಿದರೆ ಇನ್ನೆರಡು ಮೋರಿಗಳು ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ.
ಮಳೆಯಿಂದಾಗಿ ಗ್ರಾಮಾಂತರ ಪ್ರದೇಶಗಳ ಹಲವು ಒಳ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು ಜನರು ಮನೆಗಳಿಂದ ಹೊರ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.