ಜಿಲ್ಲೆ

ಬುಕ್ಕಾಪಟ್ಟಣ ವನ್ಯಜೀವಿ ಧಾಮದಲ್ಲಿ ಅತ್ಯಂತ ವಿಷಯುಕ್ತ ಹವಳದ ಹಾವು ಪತ್ತೆ !

ವಿಶೇಷ ವರದಿ

ತುಮಕೂರು: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಣ್ಣ ವಿಷಯುಕ್ತ ಹವಳದ ಹಾವು ಜಿಲ್ಲೆಯಲ್ಲಿ ಪತ್ತೆಯಾಗಿದೆ.

ನಮ್ಮ ದೇಶದಲ್ಲಿ ಕಂಡು ಬರುವ 60 ಪ್ರಬೇಧದ ವಿಷಕಾರಿ ಹಾವುಗಳಲ್ಲಿ ಅತ್ಯಂತ ಸಣ್ಣ ಹವಳದ ಹಾವು (ಸ್ಲೆಂಡರ್​ ಕೋರಲ್​ ಸ್ನೇಕ್​) ಜಿಲ್ಲೆಯ ಬುಕ್ಕಾಪಟ್ಟಣ ವನ್ಯಜೀವಿ ಧಾಮದಲ್ಲಿ ಕಂಡು ಬಂದಿದೆ. ಹವಳದ ಹಾವುಗಳು ಸುಮಾರು 30 ರಿಂದ 40 ಸೆಂ.ಮೀ.,ವರೆಗೆ ಬೆಳೆಯುವ ಸಣ್ಣದಾದ ದುಂಡಾದ ಹಾವಾಗಿವೆ. ಇದರ ದೇಹವು ತಲೆಯಿಂದ ಬಾಲದವರೆಗೆ ತೆಳ್ಳಗೆ ಸಿಲಿಂಡರ್​ ಆಕಾರದಲ್ಲಿ ಏಕರೂಪವಾಗಿರುತ್ತದೆ. ದೇಹದ ಮೇಲ್ಮೆ ಕಂದು ಬಣ್ಣ ಹೊಂದಿದ್ದರೆ ಕೆಳ ಭಾಗ ಹಳದಿ ಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ತಲೆ ಮತ್ತು ಕುತ್ತಿಗೆ ಕಪು$್ಪ ಬಣ್ಣ ಹೊಂದಿದ್ದು ಸಣ್ಣ ಕಣ್ಣುಗಳಿರುತ್ತವೆ. ಬಾಲದ ತುದಿ ಮೊಂಡಾಗಿದ್ದು ಎರಡು ಕಪು$್ಪ ಬಣ್ಣದ ಗೆರೆಗಳ ವಿಶೇಷ ರಚನೆ ಹೊಂದಿದೆ.

ರಾತ್ರಿ ವೇಳೆ ಈ ಹಾವುಗಳು ದಕ್ಷಿಣ ಭಾರತದ ಡೆಕ್ಕನ್​ ಪ್ರಸ್ಥಭೂಮಿಯ ಒಣ ಎಲೆ ಉದುರುವ ಕಾಡು ಹಾಗೂ ತೇವ ಭರಿತ ಎಲೆ ಉದುರುವ ಕಾಡುಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಹಾವುಗಳಾಗಿವೆ. ತೇವ ಭರಿತ ಮೃದು ಮಣ್ಣು ಮತ್ತು ಕಲ್ಲುಗಳ ಕೆಳಗೆ, ಒಣಗಿ ಬಿದ್ದು ಕೊಳೆಯುತ್ತಿರುವ ಮರಗಳು ಮತ್ತು ಒಣ ತರಗೆಲೆಗಳ ಕೆಳಗೆ ವಾಸಿಸುತ್ತದೆ. ನಿಶಾಚರಿಗಳಾಗಿದ್ದು ರಾತ್ರಿ ವೇಳೆ ಇವುಗಳ ಚಟುವಟಿಕೆ ಜಾಸ್ತಿ ಇರುತ್ತದೆ. ಇವುಗಳ ಆಹಾರವೆಂದರೆ ಹುಳುಹಾವು, ಗೆದ್ದಲು, ಇರುವೆ ಹಾಗೂ ಇತರೆ ಕೀಟಗಳ ಮೊಟ್ಟೆಗಳನ್ನು ತಿನ್ನುತ್ತವೆ.

ಹವಳದ ಹಾವು ಶಿರಾ ತಾಲೂಕಿನ ಬುಕ್ಕಾಪಟ್ಟಣ ವನ್ಯಜಿವಿ ಧಾಮದ ಜೀವ ವೈವಿಧ್ಯ ಅಧ್ಯಯನ ತಂಡದ ಕಣ್ಣಿಗೆ ಬಿದ್ದಿದೆ. ಈ ತಂಡದಲ್ಲಿ ಬಿ.ವಿ.ಗುಂಡಪ್ಪ ಡಾ.ಜಿ.ಎಸ್​.ಮಹೇಶ್​, ಡಾ.ಡಿ.ಆರ್​.ಪ್ರಸನ್ನಕುಮಾರ್​, ಚಂದ್ರಶೇಖರ್​ ಉಪಾಧ್ಯಾಯ, ವೆಂಕಟೇಶ್​ ಉಪಾಧ್ಯಾಯ, ಎಂ.ಮಲ್ಲಿಕಾರ್ಜುನ್​ ಇದ್ದರು.

ಬಾಕ್ಸ್​

ಜಿಲ್ಲೆಯಲ್ಲಿ 38 ಪ್ರಬೇಧದ ಹಾವುಗಳು !

ಪ್ರಪಂಚದಲ್ಲಿ ಸುಮಾರು 3789 ಪ್ರಬೇಧದದ ಹಾವುಗಳಿದ್ದರೆ, ಭಾರತದಲ್ಲಿ 300 ಪ್ರಬೇಧದ ಹಾವುಗಳಿವೆ ಅವುಗಳಲ್ಲಿ 60 ಪ್ರಬೇಧದ ಹಾವುಗಳು ವಿಷಯುಕ್ತ ಹಾವುಗಳಾಗಿವೆ. 40 ಕ್ಕಿಂತ ಹೆಚ್ಚು ಅರೆ-ವಿಷಕಾರಿ ಹಾವುಗಳಾಗಿದ್ದು 180 ಪ್ರಬೇಧದ ಹಾವುಗಳು ವಿಷ ರಹಿತವಾಗಿವೆ. ಜಿಲ್ಲೆಯಲ್ಲಿ ಒಟ್ಟು 38 ಪ್ರಬೇಧದ ಹಾವುಗಳನ್ನು ಗುರುತಿಸಲಾಗಿದ್ದು 6 ವಿಷಯುಕ್ತ ಹಾವುಗಳು ನಮ್ಮ ಜಿಲ್ಲೆಯಲ್ಲಿವೆ ಎನ್ನುತ್ತಾರೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ.

ಕೋಟ್​...

ದಕ್ಷಿಣ ಭಾರತದಲ್ಲಿ ಮಾತ್ರ ಕಂಡುಬರುವ ಹವಳ ಹಾವುಗಳು ಡೆಕ್ಕನ್​ ಪ್ರಸ್ಥ ಭೂಮಿಯ ಕಾಡುಗಳಲ್ಲಿ ವ್ಯಾಪಕವಾಗಿ ಹರಡಿದ್ದರೂ ಅಪರೂಪದಲ್ಲಿ ಕಂಡುಬರುತ್ತವೆ. ವನ್ಯಜಿವಿ ಕಾಯ್ದೆ 1972 ರ ಪ್ರಕಾರ ಶೆಡ್ಯುಲ್​ 4 ರಲ್ಲಿ ಸೇರಿಸಲಾಗಿದೆ. ಜೀವ ಜಾಲ ಹಾಗೂ ಆಹಾರ ಸರಪಳಿಯಲ್ಲಿ ತಮ್ಮದೇ ಆದ ಮಹತ್ವವನ್ನು ಹವಳ ಹಾವು ಹೊಂದಿವೆ.

ಬಿ.ವಿ.ಗುಂಡಪ್ಪ

ಅಧ್ಯಕ್ಷ, ವನ್ಯಜೀವಿಜಾಗೃತಿ ನಿಸರ್ಗ ಸಂಸ್ಥೆ