ಮೈಸೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳುಗಳನ್ನೇ ಗ್ಯಾರಂಟಿ ಮಾಡಿಕೊಂಡಿದ್ದು, ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಅವರು ಜಿಲ್ಲೆಗೆ ಮತಯಾಚಿಸಲು ಆಗಮಿಸುವ ಸಂದರ್ಭ ಜಿಲ್ಲೆಯ ಜನತೆ ಅವರನ್ನು ಪ್ರಶ್ನಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಸೋಸಲೆ ಸಿದ್ದರಾಜು ಮನವಿ ಮಾಡಿದರು.
ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ತಂದರೆ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ನೀಡಬಹುದು ಎಂದ ನರೇಂದ್ರ ಮೋದಿ ಇದುವರೆಗೆ ಕಪ್ಪು ಹಣ ತರುವ ಪ್ರಯತ್ನ ಮಾಡಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಭರವಸೆ ನೀಡಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಯುವಜನರಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ಇದೀಗ ಚುನಾವಣಾ ಬಾಂಡ್ ಹೆಸರಿನಲ್ಲಿ ಭ್ರಷ್ಟಾಚಾರಕ್ಕೆ ಇಳಿದಿದ್ದು, ಇವರಿಗೆ ಸುಪ್ರಿಂಕೋರ್ಟ್ ಚಾಟಿ ಬೀಸಿದೆ. ಇಂತಹವರನ್ನು ಮತ್ತೆ ಆಯ್ಕೆ ಮಾಡಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಇಂಡಿಯಾ ಮೈತ್ರಿಕೂಟದೊಂದಿಗೆ ನಾವು ಪಾಲುದಾರರಾಗಿದ್ದು, ರಾಜ್ಯದಲ್ಲಿ ಕೆಲವು ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇವೆ. ಟಿಕೆಟ್ ಹಂಚಿಕೆ ಕುರಿತು ಉನ್ನತ ಮಟ್ಟದಲ್ಲಿ ಮಾತುಕತೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಎಲ್.ರಂಗಯ್ಯ, ಐಶ್ವರ್ಯ, ವಿಶ್ವನಾಥ್ ಕುಲಕರ್ಣಿ, ಉಷಾ ಸಂಪತ್ ಕುಮಾರ್, ಮೈಸೂರು ಲೋಕೇಶ್ ಇದ್ದರು.