accused vinod 
ಜಿಲ್ಲೆ

ಪೊಲೀಸರಿಗೆ ಹೊಡಿ ಎಂದದಕ್ಕೆ ಹೊಡೆದೇ ಬಿಟ್ಟ ಮಗ!

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪೊಲೀಸರಿಗೆ ದೂರು ಕೊಟ್ಟರೆ ಪೊಲೀಸರಿಗೇ ಹೊಡೆಯುತ್ತೇನೆ ಎನ್ನುತ್ತಿದ್ದೆಯಲ್ಲ, ಈಗ ಹೊಡಿ ನೋಡೋಣ ಎಂದ ತಾಯಿ ಮಾತಿಗೆ ಪ್ರಚೋದನೆಗೊಂಡ ಮಗ ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ್ದಾನೆ, ಹೊಡೆತಕ್ಕೆ ಪಿಎಸ್‌ಐ ಮೂರ್ಚೆ ಹೋಗಿ ಆಸ್ಪತ್ರೆಗೆ ದಾಖಲಾಗಿರುವ ವಿಲಕ್ಷಣ ಪ್ರಕರಣ  ನಗರ ಠಾಣೆಯಲ್ಲಿ ನಡೆದಿದೆ.

ನಗರದ ಬಿನ್ನಮಂಗಲ ಗ್ರಾಮದ ಮುಕ್ತಿನಾಥೇಶ್ವರ ಬಡಾವಣೆಯ ಮಧಸೂದನ್(26) ಹಲ್ಲೆ ನಡೆಸಿದ್ದು, ಹಲ್ಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಏನಿದು ಪ್ರಕರಣ? ಬಿಇ ವ್ಯಾಸಂಗ ಮಾಡಿದ್ದ ಮಧುಸೂಧನ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ, ಈ ವಿಚಾರವಾಗಿ ತಾಯಿ ಸುಶೀಲಮ್ಮ ಮತ್ತು ಮಧುಸೂದನ್ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ನ.7ರಂದು ಸಂಜೆ ಸುಶೀಲಮ್ಮನ ಜತೆ ಮಗ ಜಗಳವಾಡಿ, ಹಲ್ಲೆ ಮಾಡಿದ್ದ. ಸುಶೀಲಮ್ಮ ಮಗನ ವಿರುದ್ಧ ನಗರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆಗಾಗಿ ಇಬ್ಬರನ್ನೂ ಠಾಣೆಗೆ ಕರೆಸಿದ್ದರು. ಪೊಲೀಸ್ ಠಾಣೆಯಲ್ಲೇ ತಾಯಿ ಮತ್ತು ಮಗ ಜಗಳವಾಡಲು ಆರಂಭಿಸಿದ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್‌ಐ ಜಯಂತಿ, ಠಾಣೆಯಲ್ಲಿ ಜೋರು ಮಾಡಬೇಡ ಎಂದು ಗದರಿ ಒಂದೇಟು ಹಾಕಿದ್ದರು ಎನ್ನಲಾಗಿದೆ.ಈ ವೇಳೆ ಪೊಲೀಸರಿಗೆ ದೂರು ಕೊಟ್ಟರೆ ಪೊಲೀಸರಿಗೇ ಹೊಡೆಯುತ್ತೇನೆ ಎಂದು ಜೋರು ಮಾಡುತ್ತಿದ್ದೆ ಈಗ ಪೊಲೀಸರಿಗೆ ಹೊಡೆದು ತೋರಿಸು ನೋಡೋಣ ಎಂದು ತಾಯಿ ಸುಶೀಲಮ್ಮ ಹೇಳಿದ್ದರು. ಕೆರಳಿದ ಮಗ ತಕ್ಷಣವೇ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ದಿಢೀರ್‌ನೆ ನಡೆದ ಘಟನೆಯಿಂದ ಮಹಿಳಾ ಪಿಎಸ್‌ಐ ಸ್ಥಳದಲ್ಲೇ ಮೂರ್ಚೆಹೋಗಿದ್ದಾರೆ, ತಕ್ಷಣ ಸಿಬ್ಬಂದಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಲಾಗಿದೆ.

ಗಾಂಜಾ ಮತ್ತಿನಲ್ಲಿ ಹಲ್ಲೆ

ನ.7ರ ಗುರುವಾರ ಸುಮಾರು ರಾತ್ರಿ ಅರೋಪಿ ಮಧುಸೂದನ್ ಗಾಂಜಾ ಸೇವನೆ ಮಾಡಿದ್ದು, ಪೊಲೀಸರು ವಿಚಾರಣೆಗೆಂದು ಕರೆದಿದ್ದ ವೇಳೆ ಗಾಂಜಾ ಮತ್ತಿನಲ್ಲೇ ಠಾಣೆ ಬಂದಿದ್ದ ಎನ್ನಲಾಗಿದೆ. ಗಾಂಜಾ ಮತ್ತಿನಲ್ಲೇ ಪಿಎಸ್‌ಐ ಜಯಂತಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.