ಜಿಲ್ಲೆ

ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ

Davangere - Desk - Ganesh M K

ಹೊನ್ನಾಳಿ: ನಾನು ಕಾಂಗ್ರೆಸ್ ಸೇರುತ್ತೇನೆ, ಬಿಜೆಪಿ ತೊರೆಯುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ನಮ್ಮ ಬಿಜೆಪಿಯ ಕೆಲವರು ರೇಣುಕಾಚಾರ್ಯ ಬಿಜೆಪಿ ಬಿಡ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷಿಯರ ವಿರುದ್ಧ ಗರಂ ಆದರು.

ಪಟ್ಟಣದ 5ನೇ ವಾರ್ಡಿನಲ್ಲಿ ಮಂಗಳವಾರ ಕೇಂದ್ರ ಸರ್ಕಾರದ 9ನೇ ವರ್ಷದ ಸಾಧನೆ ಕರಪತ್ರ ಮನೆಮನೆಗೆ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಸಚಿವನಾಗಿ ಕ್ಷೇತ್ರದ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರದ ಗಮನಕ್ಕೆ ತರುವುದು ಕರ್ತವ್ಯ. ಹಾಗಾಗಿ, ಸಿಎಂ, ಡಿಸಿಎಂ ಮತ್ತಿತರ ಸಚಿವರನ್ನು ಭೇಟಿಯಾಗಿದ್ದೇನೆ. ಆದರೆ, ಅದನ್ನೇ ಕೆಲವರು ಅಪಪ್ರಚಾರ ಮಾಡಿ ನನ್ನ ಗೌರವ ಕಳೆಯುತ್ತಿದ್ದಾರೆ. ನಾನು ಎಂದಿಗೂ ಬಿಜೆಪಿ ತೊರೆಯಲ್ಲ ಎಂದು ಸ್ಪಷ್ಟಪಡಿಸಿದರು.

ಯಾರದೋ ಮಾತನ್ನು ಕೇಳಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಿದ್ದರಿಂದ ನಮ್ಮ ಪಕ್ಷ ಸೋತು ಸುಣ್ಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್‌ವೈ ಅವರಿಂದ ಮುಖ್ಯಮಂತ್ರಿ ಹುದ್ದೆಯನ್ನು ಬಲವಂತವಾಗಿ ಕಿತ್ತುಕೊಂಡು, ರಾಜ್ಯದ ಜನತೆ ಸಮಾಧಾನ ಮಾಡಲು ಬಿಜೆಪಿ ಕೇಂದ್ರಿಯ ಸಂಸದಿಯ ಮಂಡಳಿ ಸದಸ್ಯರನ್ನಾಗಿ ಮಾಡಿದ್ದಾರೆ. ಆದರೆ, ರಾಜ್ಯದ ಜನತೆ ಇದನ್ನೆಲ್ಲ ಗಮನಿಸಿ ಚುನಾವಣೆಯಲ್ಲಿ ಬಿಜೆಪಿಯನ್ನು ಮನೆಗೆ ಕಳಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಮತ್ತೆ ಬಿಜೆಪಿ ಸಂಘಟನೆಗೊಂಡು ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಲಿಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.

ಪುರಸಭಾ ಸದಸ್ಯೆ ಸವಿತಾ ಮಹೇಶ್ ಹುಡೇದ್, ಮಾಜಿ ಅಧ್ಯಕ್ಷ ಕೆ.ವಿ. ಶ್ರೀಧರ್, ಮುಖಂಡರಾದ ಮಂಜು ಇಂಚರ, ಪಾಲಾಕ್ಷಪ್ಪ, ಎಸ್.ಎಸ್. ಬೀರಪ್ಪ, ನಿಂಗಪ್ಪ, ರಾಕೇಶ್ ಇತರರು ಇದ್ದರು.
ಮಂತ್ರಿಸ್ಥಾನಕ್ಕೆ ಕುತ್ತು ತಂದರು
ಬಿಜೆಪಿ ಅಧಿಕಾರವಧಿಯಲ್ಲಿ ದಾವಣಗೆರೆ ಜಿಲ್ಲೆಯವರೇ ಮಂತ್ರಿಗಳಾಗಬೇಕು ಎಂದು ನನಗೆ ಮಂತ್ರಿಸ್ಥಾನ ಕೊಡಲು ಎಲ್ಲ ಸಿದ್ಧ್ದತೆ ನಡೆದಿತ್ತು. ಆದರೆ, ನಮ್ಮ ಜಿಲ್ಲೆಯ ಮಹಾನುಭಾವರೊಬ್ಬರು ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಡಿಲಿಟ್ ಮಾಡಿಸಿದರು ಎಂದು ಆರೋಪಿಸಿದರು.
ನಾನು ಬಕೆಟ್ ರಾಜಕೀಯ ಮಾಡುವುದಿಲ್ಲ, ಆ ಸಂಸ್ಕೃತಿ ನನಗೆ ಗೊತ್ತಿಲ್ಲ. ಇದ್ದುದ್ದನ್ನು ನೇರವಾಗಿ ಹೇಳುತ್ತೇನೆ. ಹಾಗಾಗಿ, ನನಗೆ ಹಲವಾರು ಅವಕಾಶಗಳು ತಪ್ಪಿದವು ಎಂದು ಹೇಳಿದರು.