ತುಮಕೂರು: ಕ್ಷೇತ್ರ ಕಾರ್ಯದ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ ಅದಕ್ಕೆ ಸೃಜನಶೀಲತೆ ಕಥನದ ಸ್ಪರ್ಶ ನೀಡಿ ಕಾದಂಬರಿಗಳನ್ನು ರಚಿಸುತ್ತಿದ್ದ ಭಾರತದ ಏಕೈಕ ಕಾದಂಬರಿಕಾರ ಎಸ್.ಎಲ್.ಭೈರಪ್ಪ. ಅವರೊಬ್ಬ ಸೃಜನಶೀಲ ಅನ್ವೇಷಕ ಎಂದು ರಾಜ್ಯ ಸರ್ಕಾರದ ಗ್ರಂಥಾಲಯ ಪುಸ್ತಕ ಆಯ್ಕೆಸಮಿತಿ ಅಧ್ಯಕ್ಷ ಡಾ. ಕರೀಗೌಡ ಬೀಚನಹಳ್ಳಿ ಸ್ಮರಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಎಸ್.ಎಲ್.ಭೈರಪ್ಪ ನುಡಿನಮನ, ಸಾಹಿತ್ಯಾವಲೋಕನ ಮತ್ತು ಮೊಗಳ್ಳಿಗಣೇಶ್ಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭೈರಪ್ಪ, ಮೊಗಳ್ಳಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭೈರಪ್ಪನವರು ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದು ಉಪನ್ಯಾಸ ಮಾಡಿದ ಸಂದರ್ಭದಲ್ಲಿ ಯುಜಿಸಿ ನಿಯಮಗಳಲ್ಲಿ ಆದ ಅನೇಕ ಬದಲಾವಣೆಗಳಿಂದಾಗಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಗುಣಮಟ್ಟ ಕುಸಿದುಹೋಗಿದ್ದು ಸಂಶೋಧನೆಯನ್ನು ಮುಂಬಡ್ತಿ ಮತ್ತು ಇನ್ಕ್ರಿಮೆಂಟ್ಗೆ ಟ್ಯಾಗ್ ಮಾಡಿರುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದರು.
ಭೈರಪ್ಪ ಅವರು 94 ವರ್ಷಗಳ ಅವಧಿಯಲ್ಲಿ 40 ಕೃತಿಗಳನ್ನು ರಚಿಸಿದ್ದರು, ಅವುಗಳಲ್ಲಿ 25 ಕಾದಂಬರಿಗಳಿವೆ. ಭೈರಪ್ಪಗೆ ತಮ್ಮದೇ ಆದ ಓದುಗ ವರ್ಷವನ್ನು ಸೃಷ್ಟಿಸಿಕೊಂಡಿದ್ದರು. ಇವರು ಕರ್ನಾಟಕದಿಂದಾಚೆಯೂ ಪ್ರಸಿದ್ಧರಾಗಿದ್ದ ಅವರ ಕಾದಂಬರಿಗಳು ಭಾರತದ ಇತರೆ ಭಾಷೆಗಳಿಗೆ ತರ್ಜುಮೆಯಾಗಿ ದಾಖಲೆಯನ್ನು ಸೃಷ್ಟಿಸಿವೆ. ಇಂತಹ ಭೈರಪ್ಪಗೆ ಜ್ಞಾನಪೀಠ ಪ್ರಶಸ್ತಿ ದೊರೆಯದಿರುವುದು ವಿಷಾದಕರ ಸಂಗತಿ ಎಂದು ಡಾ. ಎಸ್.ಪಿ.ಪದ್ಮಪ್ರಸಾದ್ ಹೇಳಿದರು.
ಭೈರಪ್ಪ ಭಾರತದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಅವರು ಬರೆದ ಕಾದಂಬರಿಯ ಹಸ್ತಪ್ರತಿಯನ್ನು ಒಂದೇ ಬಾರಿಗೆ ಟೈಪ್ ಮಾಡಿಸದೆ ಅದನ್ನು 6 ತಿಂಗಳ ಕಾಲ ಇಟ್ಟು ಅನಂತರ ಅದನ್ನು ಅವರೇ ಓದಿ ಏನಾದರೂ ತಿದ್ದುಪಡಿಗಳಿದ್ದರೆ ತಿದ್ದಿ ನೋಡಿ ಆನಂತರ ಮುದ್ರಣಕ್ಕೆ ಕಳುಹಿಸುವ ಪರಿಪಾಠವನ್ನು ಇಟ್ಟುಕೊಂಡಿದ್ದರು ಎಂದು ಲೇಖಕಿ ಎಂ.ಸಿ.ಲಲಿತಾ ಸ್ಮರಿಸಿದರು.
ಭೈರಪ್ಪನವರು ಸೂಕ್ಷ$್ಮ ವಿಷಯಗಳ ಮೇಲಿನ ತಮ್ಮ ನಿಲುವುಗಳು ಮತ್ತು ವಿಷಯಗಳಿಂದಾಗಿ ಹಲವಾರು ವಿವಾದಗಳ ಕೇಂದ್ರಬಿಂದುವಾಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನಕಪುರದಲ್ಲಿ ನಡೆದಾಗ ಅದರ ಸಮ್ಮೇಳನಾಧ್ಯಕ್ಷರ ಭಾಷಣವೇ ಹಲವಾರು ವಿವಾದಗಳನ್ನು ಸೃಷ್ಟಿಸಿತು. ಬಲಪಂಥೀಯ ವಿಚಾರಧಾರೆಯ ಪ್ರತಿಪಾದಕರಾಗಿದ್ದ ಇವರ ಭಾಷಣವನ್ನು ಎಡಪಂಥೀಯರೆಲ್ಲರೂ ಟೀಕಿಸಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.
ವೇದಿಕೆಯಲ್ಲಿ ಕಲಾಶ್ರೀ ಡಾ. ಲಕ್ಷ್ಮಣದಾಸ್, ಎಚ್.ಎನ್.ಚಂದ್ರಶೇಖರ್, ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್, ಕೋಶಾಧ್ಯಕ್ಷ ಎಂ.ಎಚ್.ನಾಗರಾಜ್ ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ನಿರೂಪಿಸಿದರು. ಜಿ.ಹೆಚ್.ಮಹದೇವಪ್ಪ ಸ್ವಾಗತಿಸಿದರು. ಚಿಕ್ಕಬೆಳ್ಳಾವಿ ಶಿವಕುಮಾರ್ ವಂದಿಸಿದರು.