ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ಹೊಸಕೋಟೆಯ ಹೃದಯಭಾಗದಲ್ಲಿ ನಿರ್ಮಾಣವಾಗಿರುವ ಸ್ಕೈವಾಕ್‌ನಲ್ಲಿ ವ್ಯಾಪಾರ ನಡೆಸುವವರಿಂದ ಸಾರ್ವಜನಿಕರ ಸಂಚಾರಕ್ಕೆ ಸಾಕಷ್ಟು ಕಿರಿಕಿರಿಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪೊಲೀಸ್ ಗಸ್ತು ನಿಯೋಜಿಸಿ ಇಂಥ ಕಿರಿಕಿರಿಗೆ ಬ್ರೇಕ್ ಹಾಕುವಂತೆ ನಗರಸಭೆ ಪೊಲೀಸರ ಮೊರೆ ಹೋಗಲಿದೆ.
ಹೆದ್ದಾರಿಯಲ್ಲಿ ಪಾದಚಾರಿಗಳು ರಸ್ತೆ ದಾಟಲು ಅನುಕೂಲ ಮಾಡುವ ಸಲುವಾಗಿ ನಿರ್ಮಾಣವಾದ ಸ್ಕೈವಾಕ್‌ನ ಎರಡೂ ಬದಿಗಳಲ್ಲಿ ವ್ಯಾಪಾರಿಗಳು ಠಳಾಯಿಸುತ್ತಿದ್ದು, ಮುಂಜಾನೆ ಹಾಗೂ ಸಂಜೆ ವೇಳೆ ಆತುರವಾಗಿ ಕೆಲಸ ಕಾರ್ಯಗಳಿಗೆ ತೆರಳುವ ಪಾದಚಾರಿಗಳಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಹಲವು ವೇಳೆ ಇದೇ ಸ್ಥಳದಲ್ಲಿ ವ್ಯಾಪಾರನಿರತ ಕೆಲವರು ಚೌಕಾಸಿ ನೆಪದಲ್ಲಿ ಗಲಾಟೆ ಮಾಡಿಕೊಳ್ಳುತ್ತಾರೆ. ವಸ್ತುಗಳ ಖರೀದಿಗೆ ಗ್ರಾಹಕರು ನಿಲ್ಲುವುದರಿಂದ ಇನ್ನಿತರ ಸಾರ್ವಜನಿಕರು ಮುಂದೆ ಸಾಗಲು ಪರದಾಡುವಂತಾಗುತ್ತದೆ ಎಷ್ಟೋ ವೇಳೆ ತಳ್ಳಿಕೊಂಡು ಹೋಗಬೇಕಾದ ಪರಿಸ್ಥಿತಿ ಇರುತ್ತದೆ ಇಂಥ ವೇಳೆ ಜನರ ನಡುವೆ ಗಲಾಟೆಗಳಾಗುವ ಸಂದರ್ಭಗಳು ಎದುರಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬೆಳಗ್ಗೆ ಖಾಲಿ, ಸಂಜೆ ಹಾಜರಿ! ಸಾರ್ವಜನಿಕರ ಸಂಚಾರಕ್ಕೆ ಕಿರಿಕಿರಿಯಾಗುತ್ತಿರುವ ಬಗ್ಗೆ ಜನರು ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕ್ರಮಕ್ಕೆ ಮುಂದಾಗುವ ನಗರಸಭೆ ಸಿಬ್ಬಂದಿ ವ್ಯಾಪಾರಿಗಳನ್ನು ಸ್ಥಳದಿಂದ ಎತ್ತಂಗಡಿ ಮಾಡುತ್ತಾರೆ, ಬೆಳಗ್ಗೆ ವ್ಯಾಪಾರಿಗಳನ್ನು ಖಾಲಿ ಮಾಡಿಸಿದರೆ ಸಂಜೆಯೊಷ್ಟೊತ್ತಿಗೆ ಮತ್ತೇ ಅದೇ ಸ್ಥಳದಲ್ಲಿ ಹಾಜರಾಗಿರುತ್ತಾರೆ. ಇದೊಂದು ರೀತಿ ನಗರಸಭೆ ಸಿಬ್ಬಂದಿ ಹಾಗೂ ವ್ಯಾಪಾರಿಗಳ ನಡುವೆ ಕಣ್ಣಾಮುಚ್ಚಾಲೆ ಆಟದಂತಾಗುತ್ತಿದೆ. ಇದರಿಂದ ಸಾರ್ವಜನಿಕರೂ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಗರಸಭೆ ಪೊಲೀಸರ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆಸಿದೆ, ಸ್ಕೈವಾಕ್ ಸಮೀಪದಲ್ಲೇ ಪೊಲೀಸ್ ಠಾಣೆ ಇದ್ದು, ಪೊಲೀಸರು ಪ್ರತಿ ದಿನ ಸ್ಕೈವಾಕ್ ಬಳಿ ಗಸ್ತು ನಡೆಸಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದರೆ ಇದು ತಹಬಂದಿಗೆ ಬರಲಿದೆ ಎಂಬುದು ನಗರಸಭೆ ಲೆಕ್ಕಾಚಾರವಾಗಿದೆ.
ಮೃದುಧೋರಣೆ ಕಾರಣ: ಸ್ಕೈವಾಕ್‌ನಲ್ಲಿ ವ್ಯಾಪಾರ ನಡೆಸುವವರು ಸಾಮಾನ್ಯವಾಗಿ ಬಡ ವ್ಯಾಪಾರಿಗಳೇ ಆಗಿರುವ ಕಾರಣ ಅವರ ಹೊಟ್ಟೆಪಾಡು ಎಂಬುವ ಕಾರಣಕ್ಕೆ ನಗರಸಭೆ ಅಧಿಕಾರಿಗಳೂ ಮೃದುಧೋರಣೆ ಅನುಸರಿಸುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ವ್ಯಾಪಾರಿಗಳು ಅವರು ಅತ್ತ ಕಡೆ ಹೋಗುತ್ತಿದ್ದಂತೆ ಮತ್ತೆ ಇತ್ತ ಕಡೆಯಿಂದ ವ್ಯಾಪಾರ ಶುರುವಿಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಈ ಹಿಂದೆ ಪೋಸ್ಟರ್ ಕಿರಿಕಿರಿ: ಈ ಹಿಂದೆ ಸ್ಕೈವಾಕ್‌ನ ಎರಡೂ ಕಡೆಗಳಲ್ಲಿ ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸುವ ಚಾಳಿ ಹೆಚ್ಚಿತ್ತು, ಇದರಿಂದ ಸ್ಕೈವಾಕ್‌ನಲ್ಲಿ ನಡೆದು ಹೋಗುವ ಜನರು ಹೊರಗೆ ಕಾಣುತ್ತಿರಲಿಲ್ಲ, ಶಾಲಾ ಮಕ್ಕಳು ಸೇರಿ ಮಹಿಳೆಯರು ಸಂಚರಿಸುವ ಜಾಗದಲ್ಲಿ ಮರೆಮಾಚುವಂತೆ ದೊಡ್ಡ ಪೋಸ್ಟರ್‌ಗಳನ್ನು ಅಳವಡಿಸುತ್ತಿರುವುದು ಅಪಾಯಕಾರಿ ಎಂಬ ದೃಷ್ಟಿಯಲ್ಲಿ ಎಚ್ಚೆತ್ತ ನಗರಸಭೆ ಕಟ್ಟುನಿಟ್ಟಾಗಿ ಪೋಸ್ಟರ್‌ಗಳನ್ನು ಅಳವಡಿಸದಂತೆ ಕ್ರಮಕೈಗೊಂಡಿದೆ.
ಸ್ಕೈವಾಕ್‌ನಲ್ಲಿ ವ್ಯಾಪಾರಿಗಳಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡೆಚಣೆಯಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತವೆ, ಅವರನ್ನು ತೆರವು ಮಾಡುವ ಕೆಲಸ ಮಾಡಲಾಗುತ್ತಿರುತ್ತದೆ ಆದರೆ ಮತ್ತೆ ಅವರು ವ್ಯಾಪಾರ ಶುರುವಿಟ್ಟುಕೊಳ್ಳುತ್ತಾರೆ. ಆದ್ದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪೊಲೀಸರ ಸಹಕಾರಕ್ಕೆ ಮನವಿ ಮಾಡಲಾಗುವುದು. ಪೊಲೀಸರು ಗಸ್ತು ನಡೆಸುವ ಮೂಲಕ ಈ ಕಿರಿಕಿರಿ ತಪ್ಪಲಿದೆ ಎಂಬ ಭರವಸೆ ಇದೆ.
ಆಶಾರಾಜಶೇಖರ್, ನಗರಸಭೆ ಅಧ್ಯಕ್ಷೆ ಹೊಸಕೋಟೆ
ರಸ್ತೆ ದಾಟಲು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ, ಆದರೆ ವ್ಯಾಪಾರಿಗಳು ಅರ್ಧಜಾಗ ಅತಿಕ್ರಮ ಮಾಡಿಕೊಳ್ಳುವುದರಿಂದ ಓಡಾಟಕ್ಕೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ನಗರಸಭೆಗೆ ದೂರು ನೀಡಿದ್ದೇವೆ. ಅವರೂ ಆಗಾಗ ತೆರವು ಮಾಡಿಸುತ್ತಾರೆ. ಆದರೆ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
ಮೋಹನ್‌ಕುಮಾರ್, ಹೊಸಕೋಟೆ