ಕಾರವಾರ:ಶಿಲಾಯುಗದ ಕಾಲದ ರೇಖಾ ಚಿತ್ರವನ್ನು ಭಟ್ಕಳ ತಾಲೂಕಿನ ಕರೂರು ಗ್ರಾಮದಲ್ಲಿ ಕವಿವಿ ಇತಿಹಾಸ ಮತ್ತು ಪ್ರಾಚ್ಯವಸ್ತು ವಿಭಾಗದ ಪ್ರಾಧ್ಯಾಪಕರು ಗುರುತಿಸಿ, ದಾಖಲಿಸಿದ್ದಾರೆ.
ಮುರ್ಡೇಶ್ವರದಿಂದ ಸುಮಾರು 6 ಕಿಮೀ ದೂರದಲ್ಲಿರುವ ಕರೂರು ಗ್ರಾಮದಿಂದ 1 ಕಿಮೀ ದೂರದ ಬಾರಕೋಲ್ ಬೋಳೆಯ ಮೇಲಿನ ಜಂಬಿಟ್ಟಿಗೆಯ ಮೇಲೆ ಮಾನವ, ಎತ್ತು, ಜಿಂಕೆ ಹೀಗೆ ಚಿತ್ರಗಳ ಗುಂಪನ್ನು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ. ಜಗದೀಶ ಅಸೋದೆ ಹಾಗೂ ಡಾ. ಮಾಧುರಿ ಚೌಗುಲೆ ಅವರು ಇತ್ತೀಚೆಗೆ ಶೋಽಸಿದರು.
ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಆರ್. ಎಂ ಷಡಕ್ಷರಯ್ಯ ಹಾಗೂ ಡಾ. ಎಸ್. ಕೆ. ಕಲ್ಲೋಳಿಕರ ಮಾರ್ಗದರ್ಶನ ನೀಡಿದ್ದು, ರಾಜ್ಯ ಸರ್ಕಾರದ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿಯಾದ ಮಂಜುಳಾ ಎಲಿಗಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ. ಆದಿತ್ಯ ಹೆಗಡೆ ಸ್ಥಳೀಯ ತಿಮ್ಮಣ್ಣ ಗೊಂಡ ಕೂಡ ಪಾಳ್ಗೊಂಡಿದ್ದರು.
ಇದು ಇತಿಹಾಸ ಪೂರ್ವ ಕಾಲದ ಸಂಸ್ಕೃತಿಯನ್ನು ತಿಳಿಯಲು ಮಹತ್ವದ ಆಕವಾಗಿದೆ ಎಂದು ಡಾ. ಆರ್. ಎಂ ಷಡಕ್ಷರಯ್ಯ ವಿವರಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಜಂಬಿಟ್ಟಿಗೆ ನೆಲೆಯು 13 ಮೀಟರ್ ಉದ್ದ ಹಾಗೂ 20 ಮೀಟರ್ ಅಗಲವಿದೆ. ಜಂಬಿಟ್ಟಿಗೆಯ ಭೂಭಾಗದಲ್ಲಿ ಸುಮಾರು 20 ರೇಖಾ ಚಿತ್ರಗಳಿದ್ದು ಅವುಗಳನ್ನು ನಾಲ್ಕು ಗುಂಪುಗಳನ್ನಾಗಿ ವರ್ಗಿಕರಿಸಬಹುದು ಎಂದು ವಿವರಿಸಿದರು.
1ನೇ ಗುಂಪಿನ ಚಿತ್ರದಲ್ಲಿ ಜಿಂಕೆ, ಎತ್ತು ಮತ್ತು ಮನುಷ್ಯರ ಚಿತ್ರಗಳು ಪ್ರಮುಖವಾಗಿವೆ. ಮನುಷ್ಯನ ರೇಖಾಚಿತ್ರವು 1.65 ಮೀಟರ್‌ನಷ್ಟು ಉದ್ದವಾಗಿದ್ದು 1.25 ಸೆ.ಮೀ. ಅಗಲವಾಗಿದೆ. ನಿಂತ ಭಂಗಿಯಲ್ಲಿರುವ ಈ ಮನುಷ್ಯನು ತನ್ನ ಎಡಗೈಯನ್ನು ಸ್ವಲ್ಪ ವಕ್ರವಾಗಿ ಮೇಲಕ್ಕೆ ಎತ್ತಿ ಹಿಡಿದಿದ್ದಾನೆ. ಬಲ ಕೈಯ್ಯನ್ನು ಇಳಿ ಬಿಟ್ಟಿದ್ದು, ಅದಕ್ಕೆ ಹಗ್ಗವೊಂದನ್ನು ಕಟ್ಟಿ ಆತನ ಬಲಗಡೆ ತೋರಿಸಿದ ಎತ್ತಿನ ಕೊರಳಿಗೆ ಜೋಡಿಸಲಾಗಿದೆ. ಮನುಷ್ಯನ ಪಾದದ ಕೆಳಗೆ ಇನ್ನೊಬ್ಬ ಮನುಷ್ಯನ ಚಿತ್ರವಿದೆ. ಆತನು ಬಿಲ್ಲನ್ನು ಪ್ರಯೋಗಿಸುತ್ತಿರುವನು. ದೊಡ್ಡ ಮನುಷ್ಯನ ತಲೆಯ ಮೇಲೆ ಮತ್ತು ಆತನ ಪಾದದ ಹತ್ತಿರ ಗುಂಡಾದ ಆಳವಾದಂಥ ಕುಣಿಗಳಿವೆ. ಮನುಷ್ಯನ ಕೈಗೆ ಕಟ್ಟಿದ ಹಗ್ಗವನ್ನು ಮನುಷ್ಯನ ಕೆಳಗಡೆ ಚಿತ್ರಿಸಿದ ಕುಣಿಗಳಿಗೆ ಜೋಡಿಸಲಾಗಿದೆ. ಈ ಹಗ್ಗವನ್ನು ಈ ಚಿತ್ರದ ಕೆಳಗೆ ತೋರಿಸಿದ ಜಿಂಕೆಯ ಕೊರಳಿಗೆ ಕಟ್ಟಲಾಗಿದೆ. 2ನೇ ಗುಂಪಿನ ಚಿತ್ರಗಳಲ್ಲಿ ಒಂದು ಎತ್ತಿದೆ. ಬದಿಗೆ ಎರಡು ಜಿಂಕೆ ಮತ್ತು ಮರಿ ಜಿಂಕೆಯಿದೆ. 3ನೇ ಗುಂಪಿನ ಚಿತ್ರಗಳಲ್ಲಿ ಸುಮಾರು 5 ಸಣ್ಣ ಸಣ್ಣ ಜಿಂಕೆಗಳಿವೆ. 4ನೇ ಗುಂಪಿನ ಚಿತ್ರಗಳಲ್ಲಿ ದೊಡ್ಡ ಮನುಷ್ಯನ ಆಕೃತಿಯ ತಲೆಯ ಮೇಲೆ ಬಲಭಾಗದಲ್ಲಿ ಸ್ವಲ್ಪ ದೂರದಲ್ಲಿ ಒಂದು ಎತ್ತಿನ ರೇಖಾಚಿತ್ರವಿದೆ.
ಕರೂರು ಗ್ರಾಮದ ಚಿತ್ರಗಳನ್ನು ಶೈಲಿಯ ದೃಷ್ಟಿಯಿಂದ ಮೂರು ಕಾಲಮಾನಗಳನ್ನಾಗಿ ವರ್ಗಿಕರಿಸಬಹುದು. ಬಂಡೆರೇಖಾ ಚಿತ್ರಗಳಲ್ಲಿ ಎತ್ತು ಮತ್ತು ಜಿಂಕೆ ಚಿತ್ರಗಳು ನೂತನ ತಾಮ್ರಶಿಲಾ ಸಂಸ್ಕೃತಿ (ಕ್ರಿ.ಪೂ.1800-ಕ್ರಿ.ಪೂ.800)ಕಾಲದ್ದು, ಆಳವಾಗಿ ಕೆತ್ತಿರುವ ಕೆಲವು ಜಿಂಕೆಗಳ ರೇಖಾಚಿತ್ರಗಳು ಕಬ್ಬಿಣದ ಬೃಹತ್ ಶಿಲಾಯುಗ ಕಾಲಘಟ್ಟಕ್ಕೆ (ಕ್ರಿ.ಪೂ. 1000-ಕ್ರಿ.ಪೂ.2ನೆಯ ಶತಮಾನ) ಸೇರುತ್ತವೆ. ಬೃಹದಾಕಾರದ ಮನುಷ್ಯನ ಚಿತ್ರವು ಇತಿಹಾಸದ ಆರಂಭಿಕ (ಕ್ರಿ.ಪೂ. 1ನೆಯ ಶತಮಾನದಿಂದ- ಕ್ರಿ.ಶ. 2ನೆಯ ಶತಮಾನ) ಕಾಲಘಟ್ಟದ್ದಾಗಿದೆ ಎಂದು ಇತಿಹಾಸಕಾರರು ವಿವರಿಸಿದ್ದಾರೆ.
ಇದನ್ನೂ ಓದಿ: ಕಾರವಾರ, ಅಂಕೋಲಾಕ್ಕೆ ಇನ್ನು ಮೂರು ದಿನಕ್ಕೊಮ್ಮೆ ನೀರು
ಭಾರತದ ಪಶ್ಚಿಮ ಕರಾವಳಿಯ ಮಹಾರಾಷ್ಟçದ ರತ್ನಗಿರಿ, ಗೋವಾ ಹಾಗೂ ದಕ್ಷಿಣ ಕನ್ನಡ, ಉಡುಪಿಯ ಬೈಂದೂರಿನಲ್ಲಿ ಇಂಥ ರೇಖಾ ಚಿತ್ರಗಳಿದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಲ್ಲಿಯೂ ಇಲ್ಲ. ಹಾಗಾಗಿ ಈ ನೆಲೆಯು ಕರಾವಳಿ ಪ್ರದೇಶಗಳಲ್ಲೇ ಅತ್ಯಂತ ಮಹತ್ವದ ಬಹುದೊಡ್ಡ ನೆಲೆಯೆಂದು ತರ್ಕಿಸಬಹುದು.ಡಾ. ಆರ್. ಎಂ ಷಡಕ್ಷರಯ್ಯಕವಿವಿ ವಿಶ್ರಾಂತ ಪ್ರಾಧ್ಯಾಪಕ