ಕುಶಾಲನಗರ
ಗಣರಾಜ್ಯೋತ್ಸವದ ಅಂಗವಾಗಿ ಕೊಡಗು ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್ ಫೆಡರೇಷನ್ (ಎಸ್‌ಕೆಎಸ್‌ಎಸ್‌ಎಫ್) ವತಿಯಿಂದ ರಾಷ್ಟ್ರರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಮಾನವ ಸರಪಳಿ ಹಾಗೂ ಸೌಹಾರ್ದ ಸಭೆ ಭಾನುವಾರ ಸಂಜೆ ನಡೆಯಿತು. ಎಸ್‌ಕೆಎಸ್‌ಎಸ್‌ಎಫ್ ಕೊಡಗು ಅಧ್ಯಕ್ಷ ಶುಹೈಬ್ ಫೈಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಲುಮಾ ಅಧ್ಯಕ್ಷ ಶೈಖುನಾ ಅಬ್ದುಲ್ಲ ಮುಸ್ಲಿಯಾರ್ ಉದ್ಘಾಟಿಸಿ ಮಾತನಾಡಿ, ಇಸ್ಲಾಂ ಪ್ರಪಂಚಕ್ಕೆ ಶಾಂತಿ ಸಂದೇಶ ಸಾರಿದೆ. ಅವರ ಆಚಾರ ವಿಚಾರಗಳನ್ನು ಎಲ್ಲರೂ ಅರಿಯಬೇಕಿದೆ. ಕೋಮುವಾದ ಹಾಗೂ ಭಯೋತ್ಪಾದಕತೆಯಿಂದ ಈ ದೇಶ ಸಂರಕ್ಷಣೆಯಾಗಬೇಕು. ಜಾತ್ಯತೀತವಾದ ಹಾಗೂ ಸಂವಿಧಾನದ ಐಕ್ಯತೆಯಿಂದ ಮಾತ್ರ ಭಾರತ ಸಮೃದ್ದಿಯಾಗಬೇಕಿದೆ ಎಂದರು.
ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ವಿಶ್ವಮಾನವರಾಗಿ ಹುಟ್ಟುವ ಮಗುವನ್ನು ಜಾತಿ ಧರ್ಮಗಳ ಸಂಕೋಲೆಗಳ ಒಳಗೆ ಬಂಧಿಸಿ ಅಲ್ಪಮಾನವರಾಗಿ ಮಾಡುತ್ತಿದ್ದೇವೆ. ಬಸವಾದಿ ಶರಣರು 800 ವರ್ಷಗಳ ಹಿಂದೆ ನಾಡಿಗೆ ನೀಡಿರುವ 'ಕಳÀಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ 'ಎಂಬ ಸಪ್ತಸೂತ್ರಗಳನ್ನು ಎಲ್ಲಾ ಧರ್ಮೀಯರು ಅರಿತರಷ್ಟೇ ಸಾಕು. ಇವನಾರವ, ಇವನಾರವ ಎನ್ನದೇ ಇವ ನಮ್ಮವ ಎನ್ನುವ ಮೂಲಕ ಸಹೋದರತೆ, ಭ್ರಾತೃತ್ವ ಹಾಗೂ ಶಾಂತಿ ಸಹಬಾಳ್ವೆಯ ಜೀವನ ನಮ್ಮೆಲ್ಲರದಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಕೆಎಸ್‌ಎಸ್‌ಎಫ್ ಸಮಿತಿ ಅಧ್ಯಕ್ಷ ಶುಹೈಲ್ ಫೈಜಿ ಮಾತನಾಡಿ, ವಿಶ್ವದಲ್ಲಿಯೇ ಸುಂದರವಾದ ದೇಶ ಭಾರತದಲ್ಲಿ ಹತ್ತಾರು ಧರ್ಮಗಳು, ನೂರಾರು ಜಾತಿ, ಸಾವಿರಾರು ಭಾಷೆ ಹಾಗೂ ಸಂಸ್ಕೃತಿಗಳು ಅಡಗಿವೆ. ಪ್ರಪಂಚದ ಏಕೈಕ ಜಾತ್ಯತೀತ ರಾಷ್ಟç ಅಖಂಡತೆ, ಸಮಾನತೆ, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಎಲ್ಲರಿಗೂ ಆಶ್ರಯತಾಣವಾದ ಈ ಭೂಮಿಯಲ್ಲಿ ಎಲ್ಲರೂ ಸಹೋದರರಾಗಿ ಬಾಳುತ್ತಿರುವ ನಾವೆಲ್ಲರೂ ಭಾರತೀಯರು ಎಂದು ಎದೆ ತಟ್ಟಿ ಹೇಳುವ ಮೂಲಕ ಎಲ್ಲರೂ ಶಾಂತಿಯನ್ನು ಕಾಪಾಡಬೇಕಿದೆ ಎಂದರು.
ಸೋಮವಾರಪೇಟೆ ಒ.ಎಲ್.ವಿ. ಚರ್ಚ್ ಧರ್ಮಗುರು ಅವಿನಾಶ್ ಮಾತನಾಡಿ, ಮಾನವೀಯ ಮೌಲ್ಯಗಳು ಮನೆಯಿಂದ ಆರಂಭವಾಗಿ ಸಮಾಜದಲ್ಲಿ ಹರಡಬೇಕು ಎಂದರು. ಇಬ್ರಾಹಿಂ ಬಾತಿಶ ಶಾಂಶಿ ಮುಖ್ಯ ಭಾಷಣ ಮಾಡಿದರು.
ಸುನ್ನಿ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ತಮ್ಲಿಕ್ ಧಾರಿಮಿ, ಮಜೀದ್ ಸಾಹಿಬ್, ಶೈಖುನಾ ಉಸ್ಮಾನ್ ಫೈಜಿ,
ಕೆ.ಎ.ಯಾಕುಬ್, ಅಬ್ದುಲ್ ರಜಾಕ್ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆಗಳ ಮುಸಲ್ಮಾನ ಧರ್ಮದ ಧರ್ಮಗುರುಗಳು ಭಾಗವಹಿಸಿದ್ದರು.