ಜಿಲ್ಲೆ

ಡಿಜಿಟಲ್ ಯುಗದಲ್ಲಿ ಕೌಶಲ ಅಗತ್ಯ : ಪ್ರೊ.ಜಿ.ಆರ್. ಅಂಗಡಿ

ಮೈಸೂರು: ನಾವಿಂದು ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೇವೆ. ಇಲ್ಲಿ ನಮಗೆ ಸಾಕಷ್ಟು ಅವಕಾಶಗಳ ಜತೆಗೆ ಸಾಕಷ್ಟು ಸಮಸ್ಯೆಗಳು ಸಹ ಎದುರಾ ಗುತ್ತದೆ. ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಲು ಕೌಶಲದ ಅವಶ್ಯಕತೆ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಜಿ.ಆರ್. ಅಂಗಡಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ವತಿಯಿಂದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ‘ಡಿಜಿಟಲ್ ಯುಗದಲ್ಲಿ ಮಕ್ಕಳು ಮತ್ತು ಯುವಕರ ಜೀವನ ಕೌಶಲ ಮತ್ತು ಯೋಗಕ್ಷೇಮ’ ವಿಷಯದ ಕುರಿತು ಆಯೋಜಿಸಿದ್ದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಮ್ಮ ದಿನಚರಿ ಪ್ರಾರಂಭವಾಗುವುದು ಹಾಗೂ ಅಂತ್ಯವಾಗುವುದು ಡಿಜಿಟಲ್‌ನಲ್ಲಿ. ಡಿಜಿಟಲ್ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಪ್ರಸ್ತುತ ಎಲ್ಲ ವಹಿವಾಟಗಳು ಸಹ ಡಿಜಿಟಲ್ ರೂಪ ಪಡೆದುಕೊಂಡಿದೆ ಎಂದರು.

ಡಿಜಿಟಲ್ ಕ್ರಾಂತಿಯಿಂದ ನಾವು ಕ್ಷಣಮಾತ್ರದಲ್ಲಿ ಜಗತ್ತಿನ ಯಾವುದೇ ಭಾಗವನ್ನು ಸಂಪರ್ಕಿಸಬಹುದು. ಡಿಜಿಟಲ್ ಯುಗದಲ್ಲಿ ನಮಗೆ ಎಲ್ಲ ರೀತಿಯ ಮಾಹಿತಿಯೂ ದೊರೆಯುತ್ತದೆ. ಆದರೆ, ಯಾವ ಮಾಹಿತಿ ನಮಗೆ ಅವಶ್ಯಕ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಸಾಕಷ್ಟು ಜನರು ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ. ಮೊಬೈಲ್ ನಮ್ಮ ಮನಸ್ಸು ಹಾಗೂ ಆರೋಗ್ಯವನ್ನು ಎಷ್ಟರ ಮಟ್ಟಿಗೆ ಹಾಳು ಮಾಡುತ್ತಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮೊಬೈಲ್ ಇಲ್ಲದೆ ಮಕ್ಕಳು ಊಟ ಸಹ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯದ ದೃಷ್ಟಿಯಿಂದ ಅತಿಯಾದ ಮೊಬೈಲ್ ಬಳಕೆ ಒಳ್ಳೆಯದಲ್ಲ. ಈ ಬಗ್ಗೆ ಪಾಲಕರು ಹೆಚ್ಚು ಜಾಗೃತಿ ವಹಿಸಬೇಕು. ಕೆಲವು ನಗರಗಳ ಹೋಟೆಲ್‌ನಲ್ಲಿ ಊಟದ ಸಮಯದಲ್ಲಿ ಮೊಬೈಲ್ ಬಳಸದೆ ಇರುವವರಿಗೆ ಬಿಲ್‌ನಲ್ಲಿ ಶೇ.5 ರಷ್ಟು ರಿಯಾತಿ ನೀಡಲಾಗುತ್ತಿದ್ದು, ಇದೊಂದು ಆರೋಗ್ಯಕರ ಬೆಳವಣಿಯಾಗಿದೆ ಎಂದರು.

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕೌಶಲ ಅಗತ್ಯ. ವಿದ್ಯಾರ್ಥಿಗಳಿಗೆ ಸಮಯ ನಿರ್ವಹಣೆ ಮಾಡುವ ಕೌಶಲ ಅಗತ್ಯ. ವಿದ್ಯಾರ್ಥಿ ಗಳು ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡುವುದನ್ನು ಕಲಿತರೆ ಅವರು ಜೀವನವನ್ನು ನಿರ್ವಹಣೆ ಮಾಡುವುದು ಕಲಿತ ಹಾಗೆ. ಹಾಗಾಗಿ ಸಮಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಕೌಶಲಗಳನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಮುಕ್ತ ವಿವಿ ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮೀ ಮಾತನಾಡಿ, ಡಿಜಿಟಲ್ ಯುಗದಲ್ಲಿ ಯುವಜನರಿಗೆ ಜೀವನ ಕೌಶಲ ಹಾಗೂ ಮೌಲ್ಯಯುತ ಜೀವನ ಶೈಲಿ ರೂಪಿಸುವ ಅಗತ್ಯತೆ ಹೆಚ್ಚಾಗುತ್ತಿದೆ. ಯುವಜನರಿಗೆ ಸ್ವಯಂ ಅರಿವು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಉತ್ತಮ ತೀರ್ಮಾನ ತೆಗೆದುಕೊಳ್ಳುವುದು, ಸೃಜನಶೀಲ ಚಿಂತನೆ, ತಾರ್ತಿಕ ಚಿಂತನೆ, ಉತ್ತಮ ಸಂಹವನ, ಪರಸ್ಪರ ಸಂಬಂಧಗಳ ನಿರ್ವಹಣೆಯ ಕೌಶಲ ಅವಶ್ಯಕತೆ ಇದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಪರೀಕ್ಷಾಂಗ ಕುಲಸಚಿವ ಆನಂದ್ ಕುಮಾರ್, ಅಧ್ಯಯನ ವಿಭಾಗದ ಡೀನ್ ಪ್ರೊ. ರಾಮನಾಥ ನಾಯ್ಡು ಇದ್ದರು.