ಕಾರ್ಕಳ: ಪ್ರತಿಯೊಬ್ಬರಲ್ಲೂ ಅಪಾರವಾದ ಅಂತಃಶಕ್ತಿಯಿದೆ. ಉದರದಲ್ಲಿ ಕಸ್ತೂರಿ ಇರಿಸಿಕೊಂಡು ಊರೆಲ್ಲ ಅರಸುವ ಕಸ್ತೂರಿ ಮೃಗದಂತೆ ನಾವು ನಮ್ಮ ಶಕ್ತಿಯನ್ನು ಹೊರಗೆ ಹುಡುಕುತ್ತಿದ್ದೇವೆ. ಎಲ್ಲವೂ ಬಾಹ್ಯ ಪ್ರಪಂಚದಿಂದ ಬರುತ್ತದೆ ಎನ್ನುವ ಮನಸ್ಥಿತಿ ಬದಲಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಮೇಜರ್ ರಾಧಾಕೃಷ್ಣ ಹೇಳಿದರು.
ನಿಟ್ಟೆ ಡಾ.ಎನ್‌ಎಸ್‌ಎಂ ಪ್ರಥಮದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಕೌಶಲ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ. ಮಾತನಾಡಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಗಮನದಲ್ಲಿಟ್ಟುಕೊಂಡು ನಿರಂತರ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಆಫ್ ಕ್ಯಾಂಪಸ್‌ನ ಸಿಎಂಡಿ ನಿರ್ದೇಶಕ ಯೋಗೀಶ್ ಹೆಗ್ಡೆ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಪ್ರಕಾಶ್ ಬಿ., ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸುಮನಾ ಎಂ.ಕೆ. ಮತ್ತಿತರರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೀನಾಕ್ಷಿ ಪರಿಚಯಿಸಿದರು. ನಿಶ್ಮಿತಾ ಶೆಟ್ಟಿ ವಂದಿಸಿದರು. ತಾಝಿಮಾ ತಾಝ್ ಕಾರ್ಯಕ್ರಮ ನಿರೂಪಿಸಿದರು.