ಜಿಲ್ಲೆ

ನಿರುದ್ಯೋಗ ನಿರ್ಮೂಲನೆಗೆ ಕೌಶಲ ಕಲಿಕೆ ಮುಖ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಎಲ್ಲ ಯುವಕರಿಗೆ ಸರ್ಕಾರಿ ನೌಕರಿ ನೀಡುವುದು ಕಷ್ಟದ ಕೆಲಸ. ನಮ್ಮ ದೇಶದಲ್ಲಿ ಯುವಕರೇ ಹೆಚ್ಚಿರುವುದರಿಂದ ಕೌಶಲಯುತ ಶಿಕ್ಷಣ ನೀಡುವುದು ಆದ್ಯ ಕರ್ತವ್ಯ ಎಂದು ಜಿಟಿಟಿಸಿ ಪ್ರಾಂಶುಪಾಲ ಶಿವಾನಂದ ಕುಂಬಾರ ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ಅಂಗ ಸಂಸ್ಥೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಹಾಗೂ ಯಶೋಧಾ ವೆಲ್ಫೇರ್ ಟ್ರಸ್ಟ್​ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿವಿಧ ತರಬೇತಿಗಳ ಉದ್ಘಾಟನೆ ಹಾಗೂ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ 2014ರ ನಂತರ ಕೇಂದ್ರ ಸರ್ಕಾರ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ದೇಶದ ಅನೇಕ ಕಡೆಗಳಲ್ಲಿ ಕೌಶಲ ವಿವಿಗಳು ಸ್ಥಾಪನೆಗೊಂಡಿವೆ. ಈಗಾಗಲೇ ಹರಿಯಾಣದಲ್ಲಿ ವಿಶ್ವಕರ್ಮ ವಿವಿ ಸ್ಥಾಪನೆಯಾಗಿದ್ದು, ಅಸ್ಸಾಂನಲ್ಲಿ ಆರಂಭವಾಗುತ್ತಿರುವ ಕೌಶಲ ವಿವಿಗೆ ಧಾರವಾಡದ ಜಿಟಿಟಿಸಿ ಮಾರ್ಗದರ್ಶಕ ಸಂಸ್ಥೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಸಂಗಮನಾಥ ಮಾತನಾಡಿ, ಕಲಿತ ಕೌಶಲದಿಂದ ಜೀವನ ನಿರ್ವಹಣೆ ಮಾಡುವಂತಾಗಬೇಕು. ಈ ಸಂಸ್ಥೆ ನೀಡುತ್ತಿರುವ ಜೀವನಾಧಾರ ಕೌಶಲಗಳು ಮಹಿಳೆಯರಿಗೆ ಉತ್ತಮ ಆಧಾರವಾಗಿದೆ. ಆಹಾರ ಉತ್ಪನ್ನಗಳು, ಸ್ಪೋಕನ್​ ಇಂಗ್ಲಿಷ್​, ಕಂಪ್ಯೂಟರ್​ ತರಬೇತಿಯಂತಹ ಕೌಶಲಗಳಿಗೂ ಒತ್ತು ನೀಡುವಂತೆ ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ಸಂಸ್ಥೆಯನ್ನು ಕೋರಿದರು.
ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ನಿರ್ವಹಣಾ ಸಮಿತಿ ಸದಸ್ಯರಾದ ಡಾ. ಗೋಪಾಲಕೃಷ್ಣ ಕಮಲಾಪುರ ಮಾತನಾಡಿದರು. ಸಿ.ಎಸ್​. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. 45 ದಿನಗಳ ಆರ್​ಇ ವರ್ಕ್​ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಆನಂದ ಅಗ್ನಿಹೋತ್ರಿ ಸ್ವಾಗತಿಸಿದರು. ಪಿ.ಡಿ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪತ ಕುಮಾರ ಹೊಂಗಲಮಠ ನಿರೂಪಿಸಿದರು. ಮಲ್ಲಪ್ಪ ಹಂಪಣ್ಣವರ ವಂದಿಸಿದರು.