ಕಲಬುರಗಿ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ವೃತ್ತಿ ಬದುಕಿನಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೌಶಲ ಆಧಾರಿತ ಕಲಿಕೆಗೆ ಒತ್ತು ನೀಡಬೇಕಿರುವುದು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರೂ ಆದ ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್. ನಿರಂಜನ್ ಅಭಿಪ್ರಾಯಪಟ್ಟರು.
ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯ, ಕನ್ನಡ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಹಯೋಗದಡಿ ವಿವಿ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಉನ್ನತ ಶಿಕ್ಷಣದ ಶ್ರೇಷ್ಠತೆ ಕುರಿತ ಕರ‍್ಯಾಗಾರದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಉನ್ನತ ಶಿಕ್ಷಣ ಪ್ರವೇಶ ಸೇರಿ ಎಲ್ಲ ಹಂತಗಳಲ್ಲಿ ಕೌಶಲ ಆಧಾರಿತ ಬೋಧನೆ ಮತ್ತು ಕೋರ್ಸ್ ಪರಿಚಯಿಸಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ ಮೊದಲ ಆದ್ಯತೆ ನೀಡಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಖ್ಯಾತ ಶಿಕ್ಷಣ ತಜ್ಞ ಡಾ.ನಿರಂಜನ್ ಅವರನ್ನು ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಾಗಿ ನೇಮಿಸಿರುವ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ. ಇವರ ನೇತೃತ್ವದಲ್ಲಿ ಉನ್ನತ ಶಿಕ್ಷಣಕ್ಕೆ ಉಜ್ವಲ ಭವಿಷ್ಯವಿದೆ ಎಂದು ಆಶಿಸಿದರು.
ಶರಣಬಸವ ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸಮಕುಲಪತಿ ಪ್ರೊ.ವಿ.ಡಿ. ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಡೀನ್ ಡಾ.ಲಕ್ಷಿ ಪಾಟೀಲ್ ಮಾಕಾ, ವ್ಯವಹಾರ ಅಧ್ಯಯನ ನಿಕಾಯ ಡೀನ್ ಡಾ.ಎಸ್.ಎಚ್. ಹೊನ್ನಳ್ಳಿ ಇತರರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕಲ್ಯಾಣರಾವ ಪಾಟೀಲ್ ಸ್ವಾಗತಿಸಿದರು. ಪ್ರೊ.ಶ್ರೀನಾಥ ಶಹಾಪುರೆ ವಂದಿಸಿದರು.