ಗೋವಿಂದ ದಾಸ ಕಾಲೇಜು ಸುರತ್ಕಲ್‌ನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉದ್ಯೋಗ ಕೌಶಲ್ಯಗಳು ಕಾರ್ಯಾಗಾರ ಸರಣಿಯನ್ನು ಹಿಂದು ವಿದ್ಯಾದಾಯಿನೀ ಸಂಘ ಅಧ್ಯಕ್ಷ ಎಚ್. ಜಯಚಂದ್ರ ಹತ್ವಾರ್ ಉದ್ಘಾಟಿಸಿದರು. 
ಜಿಲ್ಲೆ

ಕಾರ್ಯಾಗಾರದಿಂದ ಕೌಶಲ್ಯ ವೃದ್ಧಿ

Mangaluru - Shravan Kumar Nala

ಮಂಗಳೂರು: ಔದ್ಯೋಗಿಕ ಕೌಶಲ್ಯಗಳ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ಪಡೆಯಲು ಮತ್ತು ಕೌಶಲ್ಯಗಳನ್ನು ವೃದ್ಧಿಸಲು ನೆರವಾಗುತ್ತವೆ ಎಂದು ಸುರತ್ಕಲ್‌ನ ಹಿಂದು ವಿದ್ಯಾದಾಯಿನೀ ಸಂಘ ಅಧ್ಯಕ್ಷ ಎಚ್. ಜಯಚಂದ್ರ ಹತ್ವಾರ್ ಹೇಳಿದರು.

ಸುರತ್ಕಲ್‌ನ ವಿದ್ಯಾದಾಯಿನೀ ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ತರಬೇತಿ ಕೇಂದ್ರ(ವಿರಾಟ್) ಪ್ರಾಯೋಜಕತ್ವದಲ್ಲಿ ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು ಸುರತ್ಕಲ್‌ನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗಗಳು ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಕೆರಿಯರ್ ಡೆವೆಲಪ್‌ಮೆಂಟ್ ಮತ್ತು ಪ್ಲೇಸ್‌ಮೆಂಟ್ ಸೆಲ್‌ಗಳ ಸಹಯೋಗದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉದ್ಯೋಗ ಕೌಶಲ್ಯಗಳು ಕಾರ್ಯಾಗಾರ ಸರಣಿ ಉದ್ಘಾಟಿಸಿ ಮಾತನಾಡಿದರು.

ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕಾರ್ಯಗಾರಗಳು ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ, ವೃತ್ತಿ ನಿಷ್ಠೆ ಮತ್ತು ಕೌಶಲ್ಯಗಳನ್ನು ಅಳವಡಿಸಿಕೊಂಡಾಗ ಉನ್ನತ ಉದ್ಯೋಗಗಳು ಲಭಿಸುತ್ತವೆ ಎಂದರು.

ವಿದ್ಯಾದಾಯಿನೀ ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ತರಬೇತಿ ಕೇಂದ್ರದ ಕೋಶಾಧಿಕಾರಿ ಶ್ರೀಕಾಂತ್ ಟಿ., ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ ಗೋಪಾಲ ಎಂ. ಗೋಖಲೆ, ಪ್ರಾಧ್ಯಾಪಕರಾದ ಕೀರ್ತನ್, ಭಾರತಿ, ಹರ್ಷರಾಣಿ, ಅಶ್ವಿತ, ಕ್ಯಾರೋಲಿನ್ ವೆನಿಸ್ಸಾ ಪಿಂಟೋ, ಶೋಭಿತಾ ಹೆಗ್ಡೆ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತ್ದಿ ಮಂಗಳೂರಿನ ಅಪ್‌ಸ್ಕಿಲ್ ಸಂಸ್ಥೆಯ ಸಹ ಸಂಸ್ಥಾಪಕ ಪ್ರಜ್ವಲ್ ಅವರು ನೌಕರಿ ತಾಣಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಂಕ್ಷಿಪ್ತ ವ್ಯಕ್ತಿ ಮಾಹಿತಿ ವಿವರಗಳನ್ನು ರಚಿಸಿ ಪ್ರಸ್ತುತ ಪಡಿಸುವ ಕುರಿತು ಪ್ರಾತ್ಯಕ್ಷಿಕವಾಗಿ ಮಾಹಿತಿ ನೀಡಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಗಣೇಶ ಆಚಾರ್ಯ ಬಿ. ಪ್ರಾಸ್ತಾವಿಸಿದರು.

ವೈಭವಿ ಸ್ವಾಗತಿಸಿದರು. ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಜೆ.ಎಸ್. ವಂದಿಸಿದರು.