ಸೋಮವಾರಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಜಮೀರ್ ಅಹಮ್ಮದ್ ಉದ್ಘಾಟಿಸಿದರು. ರುಬಿನಾ, ಬೆಳ್ಳಿಯಪ್ಪ ಇದ್ದರು.  
ಜಿಲ್ಲೆ

ಉದ್ಯೋಗ ಪಡೆಯಲು ಕೌಶಲಾಧಾರಿತ ಶಿಕ್ಷಣ ಅಗತ್ಯ

ಅಭಿನಯ್ ಎಚ್.ಎಂ

ಸೋಮವಾರಪೇಟೆ: ಭವಿಷ್ಯದಲ್ಲಿ ಉದ್ಯೋಗ ಪಡೆದುಕೊಳ್ಳಲು ಕೌಶಲಾಧಾರಿತ ಶಿಕ್ಷಣ ಅತ್ಯಗತ್ಯ ಎಂದು ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಅಭಿಪ್ರಾಯಿಸಿದರು.

ವಿಶ್ವ ಕೌಶಲ ದಿನಾಚರಣೆ ಅಂಗವಾಗಿ ಯುವಜನ ಮತ್ತು ಕ್ರೀಡಾ ಇಲಾಖೆಯ ಮೈಭಾರತ್, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳ ಭವಿಷ್ಯ ಕೌಶಲದ ಮೇಲೆ ನಿಂತಿದೆ. ಕೌಶಲಾಧಾರಿತ ಶಿಕ್ಷಣವನ್ನು ಪದವಿ ಪೂರ್ವ ಹಂತದಲ್ಲಿ ನೀಡಬೇಕಾಗಿದೆ. ಶಾಲಾ ಪಠ್ಯಕ್ರಮದಲ್ಲಿ ಕೌಶಲಾಧಾಧಾರಿತ ವಿಷಯಗಳನ್ನು ಅಳವಡಿಸಬೇಕು. ಜತೆಗೆ ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ ನೀಡಬೇಕು ಎಂದ ಅವರು, ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದರ ಜತೆಗೆ ಕೌಶ ಆಧಾರಿತ ಶಿಕ್ಷಣಕ್ಕೆ ಮೂಲಸೌಕರ್ಯ ಓದಗಿಸಬೇಕು ಎಂದು ಹೇಳಿದರು.

ಕಲಿಯುತ್ತೇನೆ, ಓದುತ್ತೇನೆ, ಬೆಳೆಯುತ್ತೇನೆ, ಸಾಧಿಸುತ್ತೇನೆ ಎಂಬ ಗುರಿಯೊಂದಿಗೆ ವಿದ್ಯಾರ್ಥಿಗಳು ಮುನ್ನಡೆಯಬೇಕು. ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯನ್ನು ಕಲಿಯಲೇಬೇಕು. ಕಂಪ್ಯೂಟರ್ ಕಲಿಕೆ ಅವಶ್ಯಕವಾಗಿದ್ದು, ಚೆನ್ನಾಗಿ ಓದಿ ಉದ್ಯೋಗ ಪಡೆಯಬೇಕು. ಸಾಧ್ಯವಾಗದಿದ್ದರೆ ಉದ್ದಿಮೆ, ಆದು ಆಗದಿದ್ದರೆ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜು ಪ್ರಾಂಶುಪಾಲ ಬಿ.ಎಂ.ಬೆಳ್ಳಿಯಪ್ಪ ಮಾತನಾಡಿ, ಶಿಕ್ಷಣ ಒಂದು ತಪಸ್ಸು ಇದ್ದ ಹಾಗೆ. ಶಿಕ್ಷಣದ ಜತೆಗೆ ಕೌಶಲಾಭಿವೃದ್ಧಿ ಆಗಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಉದ್ಭವಿಸದು ಎಂದು ಹೇಳಿದರು.

ಕೊಡಗು ಕನ್ನಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ.ಎ.ರುಬಿನಾ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಉಪಾನ್ಯಾಸಕರಾದ ಜಿ.ಎನ್.ಹೇಮಾವತಿ, ಎಚ್.ಪಿ.ಸರಿತಾ, ಎಚ್.ಪಿ.ಶಿವಶಂಕರ್, ಎಚ್.ಬಿ.ಸಮಂತ್, ಬಿ.ಕೆ.ಸುನೀತಾ ಕುಮಾರಿ, ಆರ್.ಎ.ಅಕ್ಷತಾ, ಬಿ.ಆರ್.ಪ್ರದೀಪ್ ಇದ್ದರು.