ಜಿಲ್ಲೆ

ಎಸ್‌ಕೆಎಫ್-ಸಿಡ್ಬಿ ವ್ಯಾವಹಾರಿಕ ಒಪ್ಪಂದ : ಹೊಸ ರೈಸ್‌ಮಿಲ್ ಉದ್ಯಮಿಗಳಿಗೆ ಅನುಕೂಲವಾಗುವ ಒಡಂಬಡಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಅತ್ಯಾಧುನಿಕ ಭತ್ತ ಸಂಸ್ಕರಣಾ ಯಂತ್ರೋಪಕರಣಗಳ ಉತ್ಪಾದನೆ, ಶುದ್ಧ ಕುಡಿಯುವ ನೀರು ಯಂತ್ರಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ., ಕೈಗಾರಿಕಾ ಯಂತ್ರೋಪಕರಣಗಳ ಖರೀದಿಗೆ ಹಣಕಾಸು ನೆರವು ನೀಡುವ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್(ಸಿಡ್ಬಿ) ನಡುವೆ ವ್ಯಾವಹಾರಿಕ ಒಪ್ಪಂದ ನಡೆಸಲಾಯಿತು.

ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ನ ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್, ಸಿಡ್ಬಿ ಬೆಂಗಳೂರು ವಲಯ ಮಹಾಪ್ರಬಂಧಕ ಶ್ರೀಪತಿ ಎಸ್. ಎಸ್‌ಕೆಎಫ್‌ನಲ್ಲಿ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಒಪ್ಪಂದದಿಂದ ಎಸ್‌ಕೆಎಫ್ ಮೂಲಕ ಖರೀದಿಸುವ ಯಂತ್ರೋಪಕರಣಗಳಿಗೆ ಮೇಲಾಧಾರ ಮುಕ್ತವಾಗಿ ಸುಲಭ ರೀತಿಯಲ್ಲಿ ಹಣಕಾಸು ಸಾಲ ನೀಡುವುದಲ್ಲದೆ ಕೇಂದ್ರ ಸರ್ಕಾರದ ಸಬ್ಸಿಡಿ ಒದಗಿಸಲಿದೆ. ಹೊಸದಾಗಿ ರೈಸ್‌ಮಿಲ್ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಉದ್ಯಮಿಗಳ ವ್ಯಾವಹಾರಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಸ್‌ಕೆಎಫ್‌ಗೆ ಯಂತ್ರೋಪಕರಣಗಳ ಖರೀದಿ ಬೇಡಿಕೆ ಹೆಚ್ಚಾಗಲಿದೆ.

ಸಿಡ್ಬಿ ಬೆಂಗಳೂರು ವಲಯ ಮಹಾಪ್ರಬಂಧಕ ಶ್ರೀಪತಿ ಎಸ್. ಮಾತನಾಡಿ, ಎಸ್‌ಕೆಎಫ್‌ನಂತಹ ಹೆಸರಾಂತ ಕಂಪನಿ ಉತ್ಪಾದಿಸುವ ಯಂತ್ರೋಪಕರಣಗಳನ್ನು ಖರೀದಿಸುವ ಉದ್ಯಮಿಗಳಿಗೆ ಸಾಲ ಸೌಲಭ್ಯ ನೀಡಲು ನಾವು ಹೆಮ್ಮೆ ಪಡುತ್ತೇವೆ ಎಂದರು.

ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್ ಎಸ್‌ಕೆಎಫ್ ಬೆಳೆದು ಬಂದ ಹಾದಿ, ಈ ಒಪ್ಪಂದದಿಂದಾಗುವ ಪ್ರಯೋಜನ ವಿವರಿಸಿದರು. ಎಸ್‌ಕೆಎಫ್ ಎಲಿಕ್ಸರ್‌ನ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್, ಎಸ್‌ಕೆಎಫ್ ಎಲಿಕ್ಸರ್‌ನ ನಿರ್ದೇಶಕರಾದ ಪ್ರಜ್ವಲ್ ಆಚಾರ್, ತೇಜಸ್ ಆಚಾರ್, ಸಿಇಒ ಸುಮನ್ ಮುಖರ್ಜಿ ಉಪಸ್ಥಿತರಿದ್ದರು. ಸುಮನಾ ಕಾರ್ಯಕ್ರಮ ನಿರೂಪಿಸಿದರು. ಕವನಾ ವಂದಿಸಿದರು.

ಎಸ್‌ಕೆಎಫ್ ಮೂರೂವರೆ ದಶಕದಲ್ಲಿ ರೈಸ್‌ಮಿಲ್ ಉದ್ಯಮದಲ್ಲಿನ ಬೇಡಿಕೆ, ಕಾಲಕ್ಕನುಗುಣವಾದ ಬದಲಾವಣೆಗೆ ಪೂರಕವಾದ ಯಂತ್ರೋಪಕರಣ ಆವಿಷ್ಕರಿಸುವುದರಿಂದ ಈ ಕ್ಷೇತ್ರದಲ್ಲಿ ಕ್ರಾಂತಿಕಾರಕವಾದ ಬದಲಾವಣೆಯಾಗಿದೆ. 23ಕ್ಕೂ ಅಧಿಕ ದೇಶಗಳಿಗೆ 5 ಸಾವಿರಕ್ಕೂ ಅಧಿಕ ಯಂತ್ರೋಪಕರಣ ಒದಗಿಸಿದ್ದು ಅವುಗಳ ಗುಣಮಟ್ಟ, ಕಾರ್ಯಕ್ಷಮತೆಯಿಂದಾಗಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಈ ಒಪ್ಪಂದದಿಂದ ರೈಸ್‌ಮಿಲ್ ಉದ್ಯಮ ಕ್ಷೇತ್ರಕ್ಕೆ ಪ್ರಯೋಜನವಾಗಲಿದೆ. ಉದ್ಯಮವನ್ನು ಲಾಭದ ದೃಷ್ಟಿಯಿಂದ ನೋಡದೆ ಅದರಲ್ಲಿ ಪೂರ್ಣತೊಡಗಿಸಿಕೊಳ್ಳುವಿಕೆ, ಬದ್ಧತೆ, ಸೇವಾ ಮನೋಭಾವದಿಂದ ನಡೆಸಿದರೆ ಯಶಸ್ಸಿನತ್ತ ಸಾಗಬಹುದು. ಜಿ.ರಾಮಕೃಷ್ಣ ಆಚಾರ್ ಎಸ್‌ಕೆಎಫ್ ಎಲಿಕ್ಸರ್‌ನ ಆಡಳಿತ ನಿರ್ದೇಶಕ