ಜಿಲ್ಲೆ

ಅಸ್ಥಿಪಂಜರ ಪತ್ತೆಯ ಹಿಂದಿತ್ತು ಆಸ್ತಿ ಕಬಳಿಕೆ ಹುನ್ನಾರ…?

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಾಳಮಡ್ಡಿಯ ಸಾಂಬ್ರಾಣಿ ಕಾಂಪೌAಡ್‌ನ ಮನೆಯಲ್ಲಿ ವ್ಯಕ್ತಿ ಅಸ್ಥಿಪಂಜರ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದೆ. ಮೃತ ಚಂದ್ರಶೇಖರ ಕೊಲ್ಲಾಪುರ (ಬನ್ನೂರ) ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸುವ ಯತ್ನ ನಡೆದಿತ್ತು. ಇದೇ ವಿಚಾರವಾಗಿ ಚಂದ್ರಶೇಖರನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ತಾಯಿ, ತಾಲೂಕಿನ ಕವಲಗೇರಿ ನಿವಾಸಿ ಮಲ್ಲವ್ವ ಹನುನಂತಪ್ಪ ಬನ್ನೂರ (ಕೊಲ್ಲಾಪುರ) ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಂದ್ರಶೇಖರ ಕೊಲ್ಲಾಪುರ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಸಾಂಬ್ರಾಣಿ ಕಾಂಪೌ0ಡ್‌ನ ಮನೆಯಲ್ಲಿ ಪತ್ನಿ ಸುರೇಖಾ ಜೊತೆ ವಾಸವಿದ್ದ. ದಂಪತಿಗೆ ಮಕ್ಕಳಿರಲಿಲ್ಲ. 2015ರಲ್ಲಿ ಸುರೇಖಾ ನಿಧನದ ನಂತರ ಚಂದ್ರಶೇಖರ ಮನೆಯಲ್ಲಿ ಒಬ್ಬನೇ ಇದ್ದ. ಪತ್ನಿಯ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದ. ಮನೆಯಲ್ಲಿ ಒಬ್ಬನೇ ಇರುವುದನ್ನು ಗಮನಿಸಿದ್ದ ಶಹಾಬುದ್ದೀನ್ ಬಳ್ಳಾರಿ ಹಾಗೂ ಸಹಚರರು, ಸುರೇಖಾ ಸಹೋದರಿ ವಿನೋದಾ ದಿನೇಶ ಉತ್ತಪ್ಪನ ಮತ್ತು ಯಶವಂತ ಪರುಶುರಾಮ ಪಾಟೀಲ ಎಂಬುವರು ಕೊಲೆ ಮಾಡಿರುವ ಶಂಕೆ ಇದೆ. ಆಸ್ತಿ ಕಬಳಿಕೆ ವಿಚಾರವಾಗಿ ಚಂದ್ರಶೇಖರ 2021ರ ಮಾ. 18ರಂದೇ ಇವರೆಲ್ಲರ ವಿರುದ್ಧ ವಿದ್ಯಾಗಿರಿ ಠಾಣೆಗೆ ದೂರು ನೀಡಿದ್ದ. ಅದಾದ ನಂತರ ಚಂದ್ರಶೇಖರ ಕಾಣೆಯಾಗಿದ್ದ.
ಚಂದ್ರಶೇಖರನ ಅಸ್ಥಿಪಂಜರ ಪತ್ತೆಯಾದ ಕುರಿತು ಯಶವಂತ ಪಾಟೀಲ ಆ. 14ರಂದು ವಿದ್ಯಾಗಿರಿ ಠಾಣೆಗೆ ವರದಿ ಮಾಡಿದ್ದ. ಚಂದ್ರಶೇಖರನಿಗೆ ರಕ್ತಸಂಬAಽಕರು ಇಲ್ಲ ಎಂದು ಠಾಣೆಗೆ ತಿಳಿಸಿದ್ದ. ಮಾಧ್ಯಮಗಳಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಸುದ್ದಿ ನೋಡಿ ಗ್ರಾಮದ ಹಿರಿಯರೊಂದಿಗೆ ಮನೆಗೆ ಹೋದಾಗ ಶಹಾಬುದ್ದೀನ್ ಬಳ್ಳಾರಿ ಜೀವ ಬೆದರಿಕೆ ಹಾಕಿದ್ದ. ಸ್ಥಳದಲ್ಲಿದ್ದ ವಿನೋದಾ ಕೂಡ ಅವಾಚ್ಯವಾಗಿ ನಿಂದಿಸಿದ್ದಳು. ಮೂವರೂ ಸೇರಿ ಮಗನ ಹೆಸರಿನಲ್ಲಿರುವ ಆಸ್ತಿಯ ಖೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮಲ್ಲವ್ವ ಹನುಮಂತಪ್ಪ ಬನ್ನೂರ (ಕೊಲ್ಲಾಪುರ) ವಿದ್ಯಾಗಿರಿ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ವಿವರಿಸಿದ್ದಾರೆ.