ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ತಾನು ಬದುಕುವುದರೊಂದಿಗೆ ಮತ್ತೊಬ್ಬರಿಗೆ ಬದುಕಲು ಅವಕಾಶ ಕಲ್ಪಿಸುವ ವ್ಯವಸ್ಥೆ ಸಮಾಜದಲ್ಲಿ ಇರಬೇಕು. ಬ್ಯಾಂಕ್ ಕೇವಲ ವ್ಯವಹಾರಿಕ ಕ್ಷೇತ್ರವಾಗದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿ, ಬಡ ಕುಟುಂಬಕ್ಕೆ ಬದುಕು ಕಲ್ಪಿಸಿ ಕೊಟ್ಟಿದೆ ಎಂದು ಕಟೀಲು ದೇಗುಲದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿಯ ಉಲ್ಲಂಜೆಯ ವೀಣಾ ಆಚಾರ್ಯರಿಗೆ ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವದ ಪ್ರಯುಕ್ತ ಗೃಹ ನಿರ್ವಾಣ ಯೋಜನೆಯಡಿಯಲ್ಲಿ ನೂತನ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪಾಲ್ಕಿ ಬಾಬು ರಾಯ ಆಚಾರ್ಯರು ಅಂದಿನ ದಿನಗಳಲ್ಲಿ ಬ್ಯಾಂಕ್ ಸ್ಥಾಪಿಸಿ ದೊಡ್ಡ ಸಾಧನೆ ಮಾಡಿದ್ದಾರೆ. ಆ ಕಾರಣದಿಂದ ಇಂದು ಪ್ರತಿಷ್ಠಿತ ಬ್ಯಾಂಕ್ ಆಗಿ ಮುಂದುವರಿಯುತ್ತಿದೆ. ಸಂಸ್ಥೆ 60 ವರ್ಷ ಆಚರಣೆ ಸಂದರ್ಭ 60 ಸಮಾಜಮುಖಿ ಕಾರ್ಯಗಳಿಂದ ಮುಂದುವರಿಯುತ್ತಿರುವುದು ಅಭಿನಂದನೀಯ ಎಂದರು.
ಪ್ರಮುಖರಾದ ಕೆ.ಭುವನಾಭಿರಾಮ ಉಡುಪ, ವಿಶ್ವ ಬ್ರಾಹ್ಮಣ ಸೇವಾ ಸಂಘ ಅಧ್ಯಕ್ಷ ಜಗದೀಶ್ ಆಚಾರ್ಯ ಸುರಗಿರಿ, ಸಂಸ್ಥೆಯ ನಿರ್ದೇಶಕರಾದ ವೈ.ವಿ.ವಿಶ್ವಜ್ಜಮೂರ್ತಿ, ವಿ.ಜಯ ಆಚಾರ್, ಕೆ.ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಕೆ.ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್., ಕಿನ್ನಿಗೋಳಿ ಶಾಖಾಧಿಕಾರಿ ವನಮಾಲಾ ಮತ್ತಿತರರಿದ್ದರು.
ಗುತ್ತಿಗೆದಾರ ಜನಾರ್ದನ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ವ್ಯವವಸ್ಥಾಪಕ ಯಜ್ಜೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಆನಂದ ಆಚಾರ್ಯ ಸ್ವಾಗತಿಸಿದರು. ಶ್ರೀಕಾಂತ್ ಆಚಾರ್ಯ ನಿರೂಪಿಸಿದರು. ನಿರ್ದೇಶಕ ಕೆ.ಪ್ರಕಾಶ್ ಆಚಾರ್ಯ ವಂದಿಸಿದರು.