ಜಿಲ್ಲೆ

ಬೋಧಕ ಸಿಬ್ಬಂದಿಗೆ ತರಬೇತಿ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನೂತನ ಶಿಕ್ಷಣ ನೀತಿ (ಎನ್​ಇಪಿ)ಯಡಿ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್ ಅಥವಾ ಮಿನಿ ಪ್ರಾಜೆಕ್ಟ್ ಅಥವಾ ಕೌಶಲ ವೃದ್ಧಿ ಕೋರ್ಸನ್ನು (ಎಸ್​ಇಸಿ) ಪಠ್ಯದಲ್ಲಿ ಅಳವಡಿಸಿದ್ದು, ಈ ಕುರಿತು ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ. ತುವಾರ ಕಾಲೇಜಿನ ಬೋಧಕ ಸಿಬ್ಬಂದಿಗೆ ತರಬೇತಿ ನೀಡಿದರು.

ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯ ಐಕ್ಯುಎಸಿ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಳೆದ ಸೆಮಿಸ್ಟರ್(5ನೇ ಸೆಮಿಸ್ಟರ್)ನಲ್ಲಿ ಎಸ್​ಇಸಿ ಅಭ್ಯಸಿಸಿದ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್​ಗೆ ಕಳಿಸುವುದು ಅಥವಾ ಅವರಿಂದ ಮಿನಿ ಪ್ರಾಜೆಕ್ಟ್ ಮಾಡಿಸುವುದು ಸೂಕ್ತ ಎಂದು ತಿಳಿಸಿದ ಅವರು ಇತರ ವಿಷಯ ಅಭ್ಯಸಿಸಿದ ವಿದ್ಯಾರ್ಥಿಗಳೂ ಇಂಟರ್ನ್​ಶಿಪ್ ಅಥವಾ ಮಿನಿ ಪ್ರಾಜೆಕ್ಟ್ ಆಯ್ಕೆ ಮಾಡಿಕೊಳ್ಳಬಹುದು ಎಂದರು.

ಗರಿಷ್ಠ 15 ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ, ಅವರಿಗೆ ಸಂಬಂಧಪಟ್ಟ ಉದ್ಯಮ, ಕಚೇರಿ, ಸಂಸ್ಥೆಗಳಲ್ಲಿ ಈ ತರಬೇತಿ ಕೊಡಿಸಬಹುದು. ವಿದ್ಯಾರ್ಥಿಗಳು ಆಯಾ ವಿಷಯದಲ್ಲಿ ಹೆಚ್ಚು ಜ್ಞಾನ ಸಂಪಾದಿಸಲು (ಪ್ರ್ಯಾಕ್ಟಿಕಲ್) ಈ ಕೋರ್ಸ್ ಅನುವು ಮಾಡಿಕೊಡುತ್ತದೆ. ಇದಕ್ಕೆ 50 ಅಂಕಗಳಿದ್ದು, ಯಾವುದೇ ಆಂತರಿಕ ಪರೀಕ್ಷೆ ಇರುವುದಿಲ್ಲ. ಆದರೆ, ಎಸ್​ಇಸಿ ವಿದ್ಯಾರ್ಥಿಗಳಿಗೆ ಮಾತ್ರ ಆಂತರಿಕ ಪರೀಕ್ಷೆ ಇರಲಿದೆ. ಉಳಿದ ವಿದ್ಯಾರ್ಥಿಗಳು ಉದ್ಯಮದಲ್ಲಿ ಪಡೆದ ತರಬೇತಿಯ ಅನುಭವ ಕುರಿತು ವರದಿ (ಡಿಸರ್ಟೆಶನ್) ಸಲ್ಲಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸಲ್ಲಿಸಿದ ವರದಿ, ಅವರ ಹಾಜರಾತಿ ಆಧರಿಸಿ ಅಂಕಗಳನ್ನು ವಿಭಾಗ ಮುಖ್ಯಸ್ಥರೇ ನೀಡಬೇಕಾಗುತ್ತದೆ ಎಂದು ಡಾ. ತುವಾರ ಹೇಳಿದರು.

ಡಾ.ತುವಾರ ಅವರಿಗೆ ಕಾಲೇಜು ಪರವಾಗಿ ಶಾಲು ಹೊದಿಸಿ, ಸನ್ಮಾನಿಸಲಾಯಿತು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಮತ್ತು ಕಾಲೇಜು ಒಕ್ಕೂಟದ ಅಧ್ಯಕ್ಷೆ ಡಾ.ವಿಜಯಶ್ರೀ ಹಿರೇಮಠ ಪ್ರಾರ್ಥಿಸಿದರು. ಐಕ್ಯುಎಸಿ ಸಂಚಾಲಕ ಡಾ.ಎಂ.ಬಿ. ಸಿದ್ದೇಶ ಸ್ವಾಗತಿಸಿ, ಪರಿಚಯಿಸಿದರು. ಪ್ರಾಚಾರ್ಯು ಡಾ.ಉಮಾ ನೇರ್ಲೆ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಜಿಗಳಿ ವಂದಿಸಿದರು.