ಮೈಸೂರು: ಪ್ರತಿವರ್ಷ ಕಾಡ್ಗಿಚ್ಚಿನಿಂದ ದೊಡ್ಡ ಪ್ರಮಾಣದಲ್ಲಿ ಅರಣ್ಯ ಪ್ರದೇಶ ನಾಶವಾಗುತ್ತಿದ್ದು, ಕಾಡ್ಗಿಚ್ಚನ್ನು ತಡೆಗಟ್ಟುವುದು ಅರಣ್ಯ ಇಲಾಖೆಯ ಮುಂದಿರುವ ಬಹುದೊಡ್ಡ ಸವಾಲು. ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತಂತ್ರಜ್ಞಾನವೊಂ ದನ್ನು ಅಭಿವೃದ್ಧಿ ಪಡಿಸುವ ಮೂಲಕ ಕಾಡ್ಗಿಚ್ಚು ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ವಿದ್ಯಾಲಯ ಹಾಗೂ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಶನಿವಾರ ಹಾಗೂ ಭಾನುವಾರ ಹಮ್ಮಿಕೊಂಡಿರುವ ‘ಓಪನ್ ಡೇ’ ಕಾರ್ಯಕ್ರಮದಲ್ಲಿ ಕಾಲೇಜಿನ ಪರಿಸರ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಎಂ.ಬಿ. ಲೇಖನಾ, ಎಂ. ಸುಶ್ಮಿತಾ ಹಾಗೂ ಕೀರ್ತಿ ಆರ್. ಗೌಡ ಕಾಡ್ಗಿಚ್ಚು ತಡೆಯುವ ತಂತ್ರಜ್ಞಾನ ಪ್ರದರ್ಶಿಸಿದ್ದಾರೆ. ಈ ರೀತಿಯ ಹಲವಾರು ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದು, ಕಾಲೇಜಿಗೆ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 6ರ ಅವಧಿಯಲ್ಲಿ ಭೇಟಿ ನೀಡಿದರೆ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಹಲವು ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು.
ಅರಣ್ಯದಲ್ಲಿ ಕಾಡ್ಗಿಚ್ಚು ತಡೆ ತಂತ್ರಜ್ಞಾನ ಬಳಸಿದರೆ ಅರಣ್ಯದ ಯಾವುದೇ ಭಾಗದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡರೆ ವಯರ್‌ಲೆಸ್ ಸೆನ್ಸರ್ ನೆಟವರ್ಕ್ ಮೂಲಕ ತಕ್ಷಣ ಮಾಹಿತಿ ದೊರೆತು ಸ್ವಯಂ ಚಾಲಿತವಾಗಿ ಸ್ಪಿಂಕ್ಲರ್‌ಗಳು ಬೆಂಕಿ ನಂದಿಸುವ ಕಾರ್ಯ ಮಾಡುತ್ತದೆ. ‘ಕಾಲೇಜು ಆವರಣದಲ್ಲಿ ಈ ತಂತ್ರಜ್ಞಾನದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ತಂತ್ರಜ್ಞಾನ ಕಾಡ್ಗಿಚ್ಚು ನಂದಿಸಲು ಸಹಕಾರಿ ಯಾಗಲಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಎಂ.ಬಿ. ಲೇಖನಾ, ಎಂ. ಸುಶ್ಮಿತಾ ಹಾಗೂ ಕೀರ್ತಿ ಆರ್. ಗೌಡ.
ಪ್ರಸ್ತುತ ಎಲೆಕ್ಟ್ರಿಕಲ್ ವಾಹನಗಳನ್ನು ಪ್ಲಗ್ ಬಳಕೆ ಮಾಡಿ ಚಾರ್ಚ್ ಮಾಡಲಾಗುತ್ತಿದ್ದು, ಎಸ್‌ಜೆಸಿಇ ಕಾಲೇಜಿನ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸೌಮ್ಯ, ಪಿ.ಪೂಜಾ, ಎಸ್. ಕೀರ್ತನಾ, ಸಿ. ಸುಮನಾ ಸುಮಿತ್ರಾ ವಯರ್‌ಲೆಸ್ ಸೋಲಾರ್ ಚಾರ್ಜಿಂಗ್ ಅಭಿವೃದ್ಧಿ ಪಡಿಸಿದ್ದಾರೆ. ಈ ತಂತ್ರಜ್ಞಾನದಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನು ಚಾರ್ಚ್ ಮಾಡಲು ಪ್ಲಗ್ ಬಳಸುವ ಅವಶ್ಯಕತೆ ಇಲ್ಲ. ಮ್ಯಾಗ್ನಟಿಕ್ ಪವರ್ ಮಾದರಿಯಲ್ಲಿ ಚಾರ್ಜಿಂಗ್ ಸ್ಟೇಷನ್‌ನಲ್ಲಿ ವಾಹನಕ್ಕೆ ಸೋಲಾರ್ ವಿದ್ಯುತ್ ಪೂರೈಕೆಯಾಗುತ್ತದೆ.
ಎಸ್‌ಜೆಸಿಇ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಪುಟಾಣಿ ವಿಮಾನಗಳ ಹಾರಾಟ ಮುಕ್ತ ದಿನದಲ್ಲಿ ಎಲ್ಲರ ಗಮನ ಸೆಳೆಯಿತು. ಕಾಲೇಜಿನ ವಿದ್ಯಾರ್ಥಿಗಳು ಥರ್ಮಕೋಲ್‌ನಿಂದ ವಿಮಾನ ನಿರ್ಮಿಸಿ ಬ್ಯಾಟರಿ ಶಕ್ತಿಯಿಂದ ಅವುಗಳ ಹಾರಾಟ ನಡೆಸಿದ್ದು ವಿಶೇಷವಾಗಿತ್ತು.
ಬರೋಬ್ಬರಿ 100 ಕೆ.ಜಿ. ಸಾಮರ್ಥ್ಯದ ವಸ್ತುಗಳನ್ನು ಹೊತ್ತು ಸಾಗುವ ಬ್ಯಾಟರಿ ಸೈಕಲ್‌ವೊಂದನ್ನು ಎಲ್. ಅಗ್ನಿತೇಜ್, ಕೆ. ಮನು, ಜಿ. ನೇಸರ ಹಾಗೂ ವಿ. ಸಂತೋಷ್ ಅಭಿವೃದ್ಧಿ ಪಡಿಸಿದ್ದಾರೆ. ಈ ವಾಹನ ಚಾಲನೆಗೆ ಮೂರು ರೆಡ್‌ಆ್ಯಸಿಡ್ ಬ್ಯಾಟರಿ ಬಳಕೆ ಮಾಡಲಾ ಗಿದೆ. ಒಂದು ಬಾರಿ ಚಾರ್ಚ್ ಮಾಡಿದರೆ 60 ಕಿ.ಮೀ.ವರೆಗೆ ಸಂಚರಿಸಬಹುದು. ವರ್ತಕರು ಹಾಗೂ ರೈತರಿಗೆ ಈ ಸೈಕಲ್ ಹೆಚ್ಚು ಅನುಕೂಲಕರವಾಗಿದೆ.
ಪ್ರಸ್ತುತ ಸಾಕಷ್ಟು ಜನರು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ಪಡೆಯಲು 20 ಲೀಟರ್‌ನ ಕ್ಯಾನ್ ಬಳಕೆ ಮಾಡುತ್ತಾರೆ. ಆದರೆ, ಈ ಕ್ಯಾನ್‌ಅನ್ನು ಶುಚಿಗೊಳಿಸುವುದೇ ಕಷ್ಟದ ಕೆಲಸ. ಈ ಕ್ಯಾನ್ ಶುಚಿಗೊಳಿಸುವ ಯಂತ್ರವೊಂದನ್ನು ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಡಕ್ಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ್, ಜಿ.ಎನ್. ಮಂಜುನಾಥ್, ಎಸ್.ಚಂದನ್ ಅಭಿವೃದ್ಧಿ ಪಡಿಸಿದ್ದು, ಮುಕ್ತ ದಿನದಲ್ಲಿ ಗಮನ ಸೆಳೆಯುತ್ತಿದೆ.
ಗಣಿಯಲ್ಲಿ ಕೆಲಸ ಮಾಡುವ ನೌಕರರ ಜೀವಕ್ಕೆ ಅಪಾಯ ಎದುರಾಗುವ ಹಲವಾರು ಸಂದರ್ಭಗಳು ಎದುರಾಗುತ್ತವೆ. ಗಣಿಯಲ್ಲಿ ಕೆಲಸ ಮಾಡುವ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ತಕ್ಷಣ ಮಾಹಿತಿ ನೀಡುವ ಸ್ಮಾರ್ಟ್ ಹೆಲ್ಮೆಟ್‌ಅನ್ನು ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಭು, ಪ್ರಥಮ್, ಸುದೀಪ್, ಸನತ್ ಅಭಿವೃದ್ಧಿ ಪಡಿಸಿದ್ದಾರೆ. ಹೆಲ್ಮೆಟ್‌ನಲ್ಲಿ ಅಳವಡಿಸಿರುವ ತಂತ್ರಜ್ಞಾನವು ಕಾರ್ಮಿಕರಿಗೆ ಯಾವುದೇ ರೀತಿಯ ಅಪಾಯ ಎದುರಾದರೆ ತಕ್ಷಣ ಮಾಹಿತಿ ಒದಗಿಸುತ್ತದೆ. ಈ ಮಾಹಿತಿಯ ಆಧಾರದ ಮೇಲೆ ರಕ್ಷಣಾ ಕಾರ್ಯವನ್ನು ಕೈಗೊಳ್ಳಬಹುದು.
ಎಸ್‌ಜೆಸಿಇ ಆವರಣದಲ್ಲಿ ಶನಿವಾರ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಮುಕ್ತದಿನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ವಿದ್ಯಾಲಯ ಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್, ಕುಲಸಚಿವ ಡಾ.ಎಸ್.ಎ. ಧನರಾಜ್, ಪರೀಕ್ಷಾಂಗ ಕುಲಸಚಿವ ನಂಜುಂಡಸ್ವಾಮಿ, ಎಸ್‌ಜೆಸಿಇ ಪ್ರಾಂಶುಪಾಲ ಡಾ.ಸಿ. ನಟರಾಜು, ಮಹಾರಾಜ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಉದಯಶಂಕರ್ ಅತ್ರೆ ಹಾಗೂ ಇತರರು ಇದ್ದರು.
ಇಂಜಿನಿಯರಿಂಗ್ ಕುರಿತು ಪ್ರತಿಯೊಂದು ಮಾಹಿತಿ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಮುಕ್ತ ದಿನ ಹಮ್ಮಿಕೊಂಡಿದ್ದೇವೆ. ಮುಕ್ತ ದಿನದಲ್ಲಿ ಇಂಜಿನಿಯರಿಂಗ್‌ಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಕೋರ್ಸ್‌ಗಳ ಮಾಹಿತಿ ಹಾಗೂ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ಮುಕ್ತ ದಿನದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮುಕ್ತ ದಿನದ ಸಂಚಾಲಕ ಡಾ. ಕೆ.ಎಂ. ಅನಿಲ್ ಕುಮಾರ್ ‘ವಿಜಯವಾಣಿ’ಗೆ ತಿಳಿಸಿದರು.